ಅಹಮದಾಬಾದ್: ಇಂದು ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆ ಒಂದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ 'ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಸದ್ದಾಂ ಹುಸೇನ್ ಥರ ಕಾಣುತ್ತಿದ್ದಾರೆ' ಎಂದಿದ್ದಾರೆ. ಸದ್ಯ ಗುಜರಾತ್‌ನಲ್ಲಿ ಚುನಾವಣಾ ತಯಾರಿ ನಡೆಯುತ್ತಿದ್ದು ಅಹಮದಾಬಾದ್ನಲ್ಲಿ ಬಿಜೆಪಿಯ ಅಭ್ಯರ್ಥಿ ಪರವಾಗಿ ಹಿಮಂತ್ ಬಿಸ್ವಾ ಪ್ರಚಾರಕ್ಕೆಂದು ತೆರಳಿದ್ದರು.
ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿರುವುದನ್ನು ಪ್ರಶ್ನಿಸಿದ ಹಿಮಂತ್ ಬಿಸ್ವಾ 'ಗುಜರಾತ್‌ನಲ್ಲಿ ಅವರು ಕಾಣಿಸುವುದೇ ಇಲ್ಲ. ಅವರು ಅತಿಥಿ ಉಪಸನ್ಯಾಸಕರಂತೆ ರಾಜ್ಯಕ್ಕೆ ಬರುತ್ತಾರೆ. ಅವರು ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಮಾಡಿಲ್ಲ. ಅವರು ಎಲ್ಲಿ ಚುನಾವಣೆಗಳೇ ಇಲ್ಲವೋ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅವರು ಸೋಲಿನ ಭಯದಿಂದ ಈ ರೀತಿ ಮಾಡುತ್ತಿದ್ದಾರೆ' ಎಂದು ಅಸ್ಸಾಂ ಸಿಎಂ ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.
ಈ ಹಿಂದೆ ಭಾರತ್ ಜೋಡೋ ಯಾತ್ರೆಗೆ ಸೇರಲು ಕಾಂಗ್ರೆಸ್ ಬಾಲಿವುಡ್ ನಟ-ನಟಿಯರಿಗೆ ಹಣ ನೀಡಿರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಆರೋಪಿಸಿದ್ದರು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪೂಜಾ ಭಟ್ ಮತ್ತು ಅಮೋಲ್ ಪಾಲೇಕರ್ರನ್ನು ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದರು.
ಅಫ್ತಾಬ್ ಶ್ರದ್ಧಾ ವಾಕರ್ ಎನ್ನುವ ಯುವತಿಯನ್ನು ಕೊಲೆ ಮಾಡಿದ ಸುದ್ದಿಗೆ ಸಂಬಂಧಿಸಿದಂತೆ ನಿನ್ನೆ ಧನ್ಸುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಹಿಮಂತ್ ಬಿಸ್ವಾ 'ಲವ್ ಜಿಹಾದ್' ಅನ್ನು ನಿಗ್ರಹಿಸಲು ಕಠಿಣ ಕಾನೂನು ಬೇಕು ಎಂದಿದ್ದರು. (ಏಜೆನ್ಸೀಸ್)