ನ್ಯೂಸ್

ಮತಗಳ್ಳತನ ಆರೋಪ; ಘೋಷಣಾ ಪತ್ರ ಕೇಳಿದ ಆಯೋಗಕ್ಕೆ, ಸಂಸತ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಎಂದು ರಾಹುಲ್ ತಿರುಗೇಟು| Rahul Gandhi

Rahul Gandhi: ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲಿ ಎಂದು ಹೇಳಿದ ಚುನಾವಣಾ ಆಯೋಗದ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಾನು ಈಗಾಗಲೇ ಸಂಸತ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಯೋಗದ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಮತ ಕದಿಯಲು ಚುನಾವಣಾ ಆಯೋಗ ಬಿಜೆಪಿ ಜೊತೆ ಕೈ ಜೋಡಿಸಿ ಕೆಲಸ ಮಾಡ್ತಿದೆ ಎಂದು ಆರೋಪಿಸಿದರು.

ಅಕ್ರಮದ ದಾಖಲೆ ಬಿಡುಗಡೆ ಮಾಡಿದ ನಂತರ ಜನರು ಪ್ರಶ್ನಿಸಲು ಶುರು ಮಾಡುತ್ತಿದ್ದಂತೆ ಆಯೋಗ ತನ್ನ ವೆಬ್​ಸೈಟ್​ ಅನ್ನು ಮುಚ್ಚಿದೆ. ಜನ ಮಾಹಿತಿ ಪರಿಶೀಲಿಸಲು ಆರಂಭಿಸಿದರೆ, ಇಡೀ ವ್ಯವಸ್ಥೆ ಕುಸಿಯಬಹುದು ಎಂಬ ಭಯದಿಂದ ಮಧ್ಯಪ್ರದೇಶ, ರಾಜಸ್ಥಾನ, ಬಿಹಾರದಲ್ಲಿ ತನ್ನ ವೆಬ್​ಸೈಟ್​ಗಳನ್ನು ಮುಚ್ಚಿದೆ ಎಂದರು.

2024ರ ಲೋಕಸಭಾ ಚುನಾವಣೆಯಲ್ಲಿ, ನಮ್ಮ ಮೈತ್ರಿಕೂಟ ವಿಜಯಶಾಲಿಯಾಗಿ ಹೊರಹೊಮ್ಮಿತು. ಆದಾಗ್ಯೂ, ಕೇವಲ ನಾಲ್ಕು ತಿಂಗಳ ನಂತರ, ಬಿಜೆಪಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿತು, ಇದು ಅಚ್ಚರಿಯ ಫಲಿತಾಂಶವಾಗಿತ್ತು. ತನಿಖೆ ನಡೆಸಿದಾಗ, ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸದ 1 ಕೋಟಿ ಹೊಸ ಮತದಾರರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ನಾವು ಕಂಡು ಹಿಡಿದೆವು" ಎಂದು ರಾಹುಲ್ ಹೇಳಿದರು.

ಈ ಎಲ್ಲಾ ಹೊಸ ಮತಗಳು ಪ್ರಾಥಮಿಕವಾಗಿ ಬಿಜೆಪಿಗೆ ಹೋಗಿವೆ. ಇದು ಸಂಭವನೀಯ ಅಕ್ರಮಗಳನ್ನು ಸೂಚಿಸುತ್ತದೆ. ಈ ಹೊಸ ಮತದಾರರು ಎಲ್ಲೆಲ್ಲಿ ಮತ ಚಲಾಯಿಸಿದರೋ ಅಲ್ಲೆಲ್ಲಾ ಬಿಜೆಪಿ ಗೆದ್ದಿತು. ನಮ್ಮ ಮೈತ್ರಿಕೂಟಕ್ಕೆ ಬಂದ ಮತಗಳು ಬದಲಾಗಿಲ್ಲ, ಲೋಕಸಭೆ ಚುನಾವಣಾ ಸಂಖ್ಯೆಗೆ ಹೊಂದಿಕೆಯಾಗಿದೆ. ಆದ್ರೆ ಈ ಹೊಸ 1 ಕೋಟಿ ಮತದಾರರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಭಾರತೀಯ ಚುನಾವಣಾ ಆಯೋಗ ಹೇಳಿದ್ದೇನು?

2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಮತಗಳ್ಳತನ ನಡೆದಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಲೋಪವನ್ನು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಪಿಪಿಟಿ ಮೂಲಕ ವಿಶ್ಲೇಷಣೆ ಮಾಡಿದ್ದಕ್ಕೆ ಭಾರತೀಯ ಚುನಾವಣಾ ಆಯೋಗ ಆಕ್ರೋಶ ವ್ಯಕ್ತಪಡಿಸಿ, ಇದೊಂದು ಅಸಂಬದ್ಧ ವಿಶ್ಲೇಷಣೆ ಎಂದು ಕಿಡಿಕಾರಿತ್ತು.

ದಾರಿ ತಪ್ಪಿಸುವ ವ್ಯಾಖ್ಯಾನಗಳನ್ನು ಹರಡಿದ್ದಕ್ಕಾಗಿ ಪ್ರಮಾಣವಚನದ ಮೂಲಕ ದೂರು ಸಲ್ಲಿಸಿ, ಇಲ್ಲ ರಾಷ್ಟ್ರದ ಜನರಿಗೆ ಕ್ಷಮೆಯಾಚಿಸಿ ಎಂದು ಆಯೋಗ ಸವಾಲು ಹಾಕಿದೆ. ರಾಹುಲ್ ಗಾಂಧಿ ತಮ್ಮ ವಿಶ್ಲೇಷಣೆಯಲ್ಲಿ ನಂಬಿಕೆ ಇದ್ದರೆ, ಆಯೋಗದ ವಿರುದ್ಧದ ಆರೋಪಗಳು ನಿಜ ಅಂದ್ರೆ ಘೋಷಣಾ ಪತ್ರಕ್ಕೆ ಸಹಿ ಹಾಕುವಲ್ಲಿ ಯಾವುದೇ ಸಮಸ್ಯೆ ಇರಬಾರದು. ಘೋಷಣೆಗೆ ಸಹಿ ಹಾಕದಿದ್ದರೆ, ತಮ್ಮ ವಿಶ್ಲೇಷಣೆ ಮತ್ತು ಆರೋಪ ಅಸಂಬದ್ಧ ಎಂದರ್ಥ ಎಂದು ಹೇಳಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)