ನ್ಯೂಸ್

ಸಿಎಂ ಸಿದ್ದರಾಮಯ್ಯಗೆ ರಾಹುಲ್​ ಗಾಂಧಿ ಕರೆ; ಮತ್ತಷ್ಟು ಬಲಿಷ್ಟರಾಗುವಂತೆ ಸಲಹೆ

ಬೆಂಗಳೂರು: ಮುಡಾ (MUDA) ಅಕ್ರಮ ನಿವೇಶನ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕರೆ ಮಾಡಿ ಮತ್ತಷ್ಡು ಬಲಿಷ್ಟರಾಗುವಂತೆ ಧೈರ್ಯ ತುಂಬಿದ್ದಾರೆ.

ಜಮ್ಮು-ಕಾಶ್ಮೀರ ಹಾಗು ಹರಿಯಾಣ ಚುನಾವಣಾ ಪ್ರಚಾರದಲ್ಲಿರುವ ರಾಹುಲ್ ಗಾಂಧಿ, ಬೆಳಗ್ಗೆ ಸಿದ್ಧರಾಮಯ್ಯಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. . ಬಿಜೆಪಿಯ ರಾಜಕೀಯ ಷಡ್ಯಂತ್ರದ ವಿರುದ್ಧ ಹೋರಾಟ ನಡೆಸಬೇಕು, ಎದೆಗುಂದುವುದು ಬೇಡ, ಅಭಿವೃದ್ಧಿ ಕಾರ್ಯಗಳು ಮತ್ತು ಗ್ಯಾರಂಟಿ ಅನುಷ್ಠಾನ ಯಾವುದೇ ಕಾರಣಕ್ಕೂ ನಿಲ್ಲಬಾರದು. ಪೂರ್ವ ನಿಗದಿಯಂತೆ ಸಭೆ-ಸಮಾರಂಭಗಳು ನಡೆಯಬೇಕು. ನೀವು ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜಿಪಿಯ ಅಪಪ್ರಚಾರವನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ರಾಹುಲ್​ ಗಾಂಧಿ ಕಿವಿಮಾತು ಹೇಳಿದ್ದಾರೆ ಎಂದು ಕಾಂಗ್ರೆಸ್​ ಉನ್ನತ ಮೂಲಗಳು ತಿಳಿಸಿವೆ.

ಹೈಕೋರ್ಟ್​ ಹಾಗೂ ಜನಪ್ರತಿನಿಧಿ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಹೈಕಮಾಂಡ್​ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವುದು ಮುಖ್ಯಮಂತ್ರಿಗಳಿಗೆ ಶಕ್ತಿ ತುಂಬಿದಂತಾಗಿದೆ.

ಜನಪ್ರತಿನಿಧಿ ನ್ಯಾಯಾಲಯದ ತೀರ್ಪನ್ನು ಪ್ತಶ್ನೆ ಮಾಡದೇ ತನಿಖೆ ಎದುರಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.‌ ಕಾನೂನು ತಜ್ಞರೊಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸುತ್ತಿದ್ದಾರೆ. ಸಿಆರ್ ಪಿಸಿ ಅಡಿ ಜನಪ್ರತಿನಿಧಿ ನ್ಯಾಯಾಲಯ ತೀರ್ಪು ನೀಡಿರುವುದನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ ಎನ್ನಲಾಗಿದೆ.