ಮಳೆಯ ರೌದ್ರಾವತಾರಕ್ಕೆ ತತ್ತರಿಸಿದ ಬ್ರೆಜಿಲ್ 
ನ್ಯೂಸ್

ಜಿಲ್‌ನಲ್ಲಿ ಪ್ರವಾಹದ ಆರ್ಭಟ; ನೀರಿನಲ್ಲಿ ಕೊಚ್ಚಿಹೋದ ಅಂಗಡಿಗಳು | Brazil Flood

Brazil Flood: ದಕ್ಷಿಣ ಬ್ರೆಜಿಲ್‌ನಲ್ಲಿ ಭಾರೀ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪರಾನಾ ರಾಜ್ಯದ ನೈಋತ್ಯ ಭಾಗದಲ್ಲಿರುವ ವೆರೆ ನಗರದಲ್ಲಿ ಪ್ರವಾಹದ ನೀರು ಏಕಾಏಕಿ ನುಗ್ಗಿದ್ದು, ರಸ್ತೆಗಳು, ಅಂಗಡಿಗಳು ಹಾಗೂ ಕಟ್ಟಡಗಳು ಜಲಾವೃತವಾಗಿವೆ.

ಅತಿವೃಷ್ಟಿಯಿಂದಾಗಿ ನದಿಯ ನೀರಿನ ಮಟ್ಟ ಕ್ಷಣಾರ್ಧದಲ್ಲಿ ಸುಮಾರು 1.5 ಮೀಟರ್‌ನಷ್ಟು ಏರಿಕೆಯಾಗಿದೆ. ನೀರಿನ ರಭಸಕ್ಕೆ ವಾಹನಗಳು, ಮಳಿಗೆಗಳ ಪೀಠೋಪಕರಣಗಳು ಹಾಗೂ ಕಟ್ಟಡದ ಕೆಲವು ಭಾಗಗಳು ಕೊಚ್ಚಿಹೋಗಿವೆ. ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹದ ನೀರು ನುಗ್ಗಿ ಭಾರೀ ಹಾನಿ ಉಂಟುಮಾಡಿದೆ.

ಐವರ ರಕ್ಷಣೆ, ಮಹಿಳೆ ನಾಪತ್ತೆ

ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ಆರು ಜನರ ಪೈಕಿ ಐವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ, ಓರ್ವ ಮಹಿಳೆ ನಾಪತ್ತೆಯಾಗಿದ್ದು, ಆಕೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ.

ಪ್ರವಾಹದಿಂದ ವೆರೆ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, 300ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಸ್ಥಳೀಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ.

ಪರಾನಾ ರಾಜ್ಯದಲ್ಲೂ ಭಾರೀ ಹಾನಿ

ವೆರೆ ನಗರ ಮಾತ್ರವಲ್ಲದೆ, ಪರಾನಾ ರಾಜ್ಯದ ಇತರ ಪ್ರದೇಶಗಳಲ್ಲಿಯೂ ಭಾರೀ ಮಳೆಯಿಂದ ತೀವ್ರ ಹಾನಿಯಾಗಿದೆ. ಮನೆಗಳಿಗೆ ಏಕಾಏಕಿ ಪ್ರವಾಹದ ನೀರು ನುಗ್ಗಿದ ಪರಿಣಾಮ ಹೊರಬರಲಾಗದೆ ಇಬ್ಬರು ವೃದ್ಧರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಇರಾನ್​​ನಲ್ಲಿ 19 ವರ್ಷದ ಗರ್ಭಿಣಿ ಮಗಳ ಹತ್ಯೆ; ಮಾತ್ರೆ ನುಂಗಿಸಿ, ಉಸಿರುಗಟ್ಟಿಸಿ ಕೊಂದ ಪೋಷಕರು..Iran

ಭಾರೀ ಮಳೆ ಮತ್ತು ದಿಢೀರ್ ಪ್ರವಾಹದಿಂದ ದಕ್ಷಿಣ ಬ್ರೆಜಿಲ್‌ನ ಹಲವು ಪ್ರದೇಶಗಳಲ್ಲಿ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದ್ದು, ರಕ್ಷಣಾ ಕಾರ್ಯಗಳು ಮುಂದುವರಿದಿವೆ.