ಇರಾನ್​​ನಲ್ಲಿ 19 ವರ್ಷದ ಗರ್ಭಿಣಿ ಮಗಳ ಹತ್ಯೆ; ಮಾತ್ರೆ ನುಂಗಿಸಿ, ಉಸಿರುಗಟ್ಟಿಸಿ ಕೊಂದ ಪೋಷಕರು..Iran

ಮೃತ ಯುವತಿ ಹೆಲಿಯಾ ಫತ್ತಾಹಿ
ಮೃತ ಯುವತಿ ಹೆಲಿಯಾ ಫತ್ತಾಹಿ
Published on: 
  • 19 ವರ್ಷದ ಗರ್ಭಿಣಿಯನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ ಪೋಷಕರು.

  • ಇರಾನ್​ನ ಸನಂದಾಜ್ ನಗರದಲ್ಲಿ ನಡೆದ ಘಟನೆ, ಪೋಷಕರ ಬಂಧನ.

  • ಮಾತ್ರೆಗಳನ್ನು ನುಂಗಿಸಿ, ತೀವ್ರವಾಗಿ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಕೊಂದ ಪೋಷಕರು.

ಟೆಹ್ರಾನ್: ಇರಾನ್​ನಲ್ಲಿ 19 ವರ್ಷದ ಗರ್ಭಿಣಿ ಮಗಳನ್ನು, ಆಕೆಯ ಪೋಷಕರೇ ಉಸಿರುಗಟ್ಟಿಸಿ ಕೊಂದ ಘಟನೆ ಬೆಳಕಿಗೆ ಬಂದಿದೆ. ಇದೊಂದು ಮರ್ಯಾದಾ ಹತ್ಯೆ ಪ್ರಕರಣ ಎಂದು ಗುರುತಿಸಲಾಗಿದೆ.

ಇರಾನ್‌ನ ಸನಂದಾಜ್ ನಗರದಲ್ಲಿ ಈ ಘಟನೆ ನಡೆದಿದ್ದು, ಹೆಲಿಯಾ ಫತ್ತಾಹಿ (19) ಎಂದು ಗುರುತಿಸಲಾಗಿದೆ. ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ವೋರಿಯಾ ಫತ್ತಾಹಿ ಮತ್ತು ಲೈಲಾ ವೀಸ್ ಎಂದು ಗುರುತಿಸಲಾಗಿದೆ. ವಿಚಾರಣೆಯ ವೇಳೆ ಪೋಷಕರಿಬ್ಬರೂ ತಾವೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಇಲ್ಲಿನ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

Also Read
14 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕನ ಕೇಸ್‌ಗೆ ಬಿಗ್ ಟ್ವಿಸ್ಟ್: ಅಸ್ಸಾಂನಲ್ಲಿ ಕೊಲೆ ಆರೋಪಿ ಅರೆಸ್ಟ್! | Teacher Missing Case
ಮೃತ ಯುವತಿ ಹೆಲಿಯಾ ಫತ್ತಾಹಿ

ಏನಾಗಿತ್ತು?

ತಾನು ಯುವಕನೊಬ್ಬನ ಜೊತೆಗೆ ಹೊಂದಿದ ಸಂಬಂಧದಿಂದಾಗಿ, 2 ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ಹೆಲಿಯಾ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಳು. ಇದರಿಂದ ಸಿಟ್ಟಾದ ಅವರು, ಆಕೆಗೆ ಬಲವಂತವಾಗಿ ಸುಮಾರು 30 Anticonvulsant ಮಾತ್ರೆಗಳನ್ನು ನುಂಗಿಸಿ, ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೆಂಗಾವ್ ಮಾನವ ಹಕ್ಕುಗಳ ಸಂಘಟನೆ' ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆರೋಪಿ ಪೋಷಕರು ಮೊದಲಿಗೆ ಶನಿವಾರ (ನ.21)ರಂದು ಹೆಲಿಯಾ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯಕ್ಕೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿದ ನಂತರ, ಆಕೆಗೆ ಬಲವಂತವಾಗಿ ಮಾತ್ರೆಗಳನ್ನು ನುಂಗಿಸಿದ್ದಾರೆ. ಆದರೆ, ಮಾತ್ರೆಗಳನ್ನು ನುಂಗಿಸಿದ ಬಳಿಕವೂ ಆಕೆ ಇನ್ನೂ ಜೀವಂತವಾಗಿರುವುದನ್ನು ಗಮನಿಸಿದ ಪೋಷಕರು, ದಿಂಬಿನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಆಕೆಯ ಪ್ರಾಣ ತೆಗೆದಿದ್ದಾರೆ.

ಹೆಂಗಾವ್ ಸಂಘಟನೆ ಕಿಡಿ

ಕೌಟುಂಬಿಕ ಹಿಂಸಾಚಾರದಿಂದ ಯುವತಿಯರು ಮತ್ತು ಮಕ್ಕಳನ್ನು ರಕ್ಷಿಸಲು ಸರ್ಕಾರ ಪರಿಣಾಮಕಾರಿ ಕಾನೂನುಗಳನ್ನು ಜಾರಿ ಮಾಡಲು ವಿಫಲವಾಗಿದೆ. ಇದರೊಂದಿಗೆ ಕಾನೂನಿನಲ್ಲಿರುವ ಲೋಪದೋಷಗಳು ಮತ್ತು 'ಮರ್ಯಾದಾ ಹತ್ಯೆ' ಆರೋಪಿಗಳಿಗೆ ನೀಡಲಾಗುವ ಶಿಕ್ಷೆಗಳು ಮತ್ತೆ ಹಿಂಸಾಚಾರಕ್ಕೆ ಕಾರಣವಾಗುವಂತೆ ಮಾಡುತ್ತಿದೆ. ಅಪರಾಧಿಗಳಿಗೆ ಶಿಕ್ಷೆಯ ಭಯವಿಲ್ಲದ ಇಂತಹ ಕೆಟ್ಟ ಆಚರಣೆಗಳನ್ನು ಪೋಷಿಸುವಂತೆ ಮಾಡುತ್ತಿದೆ ಎಂದು ಹೆಂಗಾವ್ ಸಂಘಟನೆ ಕಿಡಿಕಾರಿದೆ.

ಇರಾನ್‌ನಲ್ಲಿ ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ

ಯುವತಿಯರ ಮೇಲೆ ನಡೆಸುತ್ತಿರುವ ಈ ಕ್ರೂರ ದಾಳಿ ಇದೇ ಮೊದಲೇನಲ್ಲ. ಒಂದು ವಾರಕ್ಕಿಂತ ಸ್ವಲ್ಪ ಹೆಚ್ಚಿನ ಅವಧಿಯಲ್ಲಿ ಇರಾನ್‌ನಲ್ಲಿ ನಡೆದ ಯುವತಿಯರ ಮೂರನೇ ಹತ್ಯೆ ಇದಾಗಿದೆ.

ಕಳೆದ ಬುಧವಾರ (ನವೆಂಬರ್ 18), ಗಿಲಾನ್ ಪ್ರಾಂತ್ಯದಲ್ಲಿ 23 ವರ್ಷದ ಸದಾಫ್ ಹಗ್ಬಿನ್ ಎಂಬ ಯುವತಿಯನ್ನು, ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಆಕೆಯ ಮಾಜಿ ಪ್ರಿಯಕರ ಹುಟ್ಟುಹಬ್ಬದ ಪಾರ್ಟಿಯಲ್ಲೇ ಗುಂಡಿಕ್ಕಿ ಕೊಲ್ಲಲ್ಲಾಗಿತ್ತು.

ಅದಕ್ಕೂ ಮುನ್ನ, ಕೆರ್ಮನ್‌ಶಾದಲ್ಲಿ 16 ವರ್ಷದ ಶಾಲಾ ಬಾಲಕಿ ಸೊಗಂದ್ ಸಯಾದಿ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಳು. ತನ್ನನ್ನು ತಂದೆಯೊಂದಿಗೆ ಮನೆಗೆ ಕಳುಹಿಸಿದರೆ ಅವರು ತನ್ನನ್ನು ಕೊಲ್ಲುತ್ತಾರೆ ಎಂದು ಆಕೆ ಶಾಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಳು ಎಂದು ಶಿಕ್ಷಕರ ಸಂಘಟನೆಗಳ ರಾಷ್ಟ್ರೀಯ ಜಾಲ ತಿಳಿಸಿದೆ.

ಗಾಯಕಿಗೆ 74 ಏಟು

ಇದೇ ವಾರದ ಆರಂಭದಲ್ಲಿ, ಯೂಟ್ಯೂಬ್‌ನಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟ ಸಂಗೀತ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಇರಾನ್ ಅಧಿಕಾರಿಗಳು ಖ್ಯಾತ ಗಾಯಕಿ ಮತ್ತು ಆಕೆಯ ತಂಡದ ಸದಸ್ಯರಿಗೆ 74 ಚಡಿಯೇಟಿನ ಶಿಕ್ಷೆ ನೀಡಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಸಂಗೀತ ಕಚೇರಿಗಾಗಿ 29 ವರ್ಷದ ಗಾಯಕಿ ಪರಸ್ತೂ ಅಹ್ಮದಿ, ನಾಲ್ವರು ಸಂಗೀತಗಾರರು ಮತ್ತು ಆಕೆಯ ತಂಡದ ನಾಲ್ವರು ಸದಸ್ಯರಿಗೆ ಜೂನ್‌ನಲ್ಲಿ ಚಡಿಯೇಟಿನ ಶಿಕ್ಷೆ ವಿಧಿಸಲಾಗಿತ್ತು. ಈ ಎಲ್ಲ ಸಮಸ್ಯೆಗೆ ಮಕ್ತಿ ಎಂದು ಎನ್ನುವುದು ಹೆಂಗಾವ್ ಸಂಘಟನೆಯ ಪ್ರಶ್ನೆಯಾಗಿದೆ, (ಏಜೆನ್ಸೀಸ್).