Pradeep Ranganathan: ಈ ವರ್ಷದ ಫೆಬ್ರವರಿಯಲ್ಲಿ ತೆರೆಕಂಡು ಸೂಪರ್ಹಿಟ್ ಆದ ತಮಿಳು ಸಿನಿಮಾ ‘ಡ್ರ್ಯಾಗನ್’, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಚಿತ್ರದ ಮೂಲಕ ಸಿನಿಪ್ರಿಯರ ಮನ ಗೆದ್ದ ನಟ ಪ್ರದೀಪ್ ರಂಗನಾಥನ್ ಇದೀಗ ತಮ್ಮ ಮುಂಬರುವ ‘ಡ್ಯೂಡ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿದ್ದಾರೆ. ಇದೇ ಅ.17ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿರುವ ಈ ಚಿತ್ರದ ಸಂದರ್ಶನದ ವೇಳೆ ಬಾಲ್ಯದ ಕಷ್ಟದ ಹಾದಿ ಮತ್ತು ತಂದೆಯ ಬಗ್ಗೆ ಮಾತನಾಡಿದ ಪ್ರದೀಪ್, ಹಲವು ಕುತೂಹಲಕಾರಿ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ನೋಡಲು ಒಬ್ಬ ಸಾಧಾರಣ ಮನುಷ್ಯನಂತೆ ಬೆಳ್ಳಿಪರದೆಯ ಮೇಲೆ ಕಾಣುವ ಪ್ರದೀಪ್, ರಿಯಲ್ ಲೈಫ್ನಲ್ಲೂ ಹಾಗೆಯೇ ಇದ್ದಾರೆ. ಬಾಲ್ಯದಿಂದಲೂ ಕಷ್ಟದಲ್ಲೇ ಬೆಳೆದು ಬಂದಿರುವ ಅವರು, ಇಂದು ಕಾಲಿವುಡ್ನಲ್ಲಿ ಜನಪ್ರಿಯ ನಟನಾಗಿ ಮಿಂಚುತ್ತಿದ್ದಾರೆ. ಇದರೊಟ್ಟಿಗೆ ಒಳ್ಳೊಳ್ಳೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಸಿನಿಮಾದಲ್ಲಿ ನಟಿಸುತ್ತೇನೆ ಒಂದು ಅವಕಾಶ ಕೊಡಿ ಎಂದು ವರ್ಷಗಳ ಕಾಲ ಅಲೆದಾಡಿದ ಪ್ರದೀಪ್ ಇಂದು ಸ್ಟಾರ್ ಹೀರೋ. ಇಂದಿಗೂ ಸಿಂಪಲ್ ಜೀವನವನ್ನೇ ನಡೆಸುತ್ತಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
"ಈಗಲೂ ಚೆನ್ನೈನಲ್ಲಿ ನಮ್ಮ ತಂದೆ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಒಂದು ಸಣ್ಣ ಜೆರಾಕ್ಸ್ ಅಂಗಡಿಯಿಂದಲೇ ನಮ್ಮ ಕಟುಂಬವನ್ನು ಬೆಳೆಸಿದರು. ಇಂದು ನನಗೆ ಹೆಸರು, ಹಣ, ಜನಪ್ರಿಯತೆ ಎಲ್ಲವೂ ಸಿಕ್ಕಿದೆ. ಆದರೂ ಸಹ ಅಪ್ಪ, ಜೆರಾಕ್ಸ್ ಅಂಗಡಿಯನ್ನು ಇಂದಿಗೂ ನೋಡಿಕೊಳ್ಳುತ್ತಿದ್ದಾರೆ. ಇದು ಸಾಕು ಎಂದಿದ್ದಕ್ಕೆ, ನಾವು ಬೆಳೆದು ಬಂದ ಹಾದಿಯನ್ನು ಮರೆಯಬಾರದು. ಕಷ್ಟಕಾಲದಲ್ಲಿ ನಮ್ಮ ಕೈಹಿಡಿದು ಬದುಕಿಸಿದ್ದನ್ನು ಬಿಡಬಾರದು ಎಂದು ಹೇಳ್ತಾರೆ. ಪ್ರತಿನಿತ್ಯ ಅಂಗಡಿಗೆ ಬಸ್ನಲ್ಲೇ ಹೋಗ್ತಾರೆ. ನನ್ನದೇ ಕಾರು ಕೊಟ್ಟರೂ, ಅದನ್ನು ಅವರು ಮುಟ್ಟುವುದಿಲ್ಲ. ಬದಲಿಗೆ ಬಸ್ ಅನ್ನೇ ಆಯ್ಕೆ ಮಾಡುತ್ತಾರೆ. ಅವರದ್ದು ಸಿಂಪಲ್ ಲೈಫ್" ಎಂದಿದ್ದಾರೆ ಪ್ರದೀಪ್.
ಇದೇ ಅ.17ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಎದುರುನೋಡುತ್ತಿರುವ ‘ಡ್ಯೂಡ್’ ಚಿತ್ರದಲ್ಲಿ ನಟ ಪ್ರದೀಪ್ ರಂಗನಾಥನ್ ಮತ್ತು ನಟಿ ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿಶ್ವರನ್ ಅವರ ಚೊಚ್ಚಲ ನಿರ್ದೇಶನ ಇದಾಗಿದ್ದು, ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ,(ಏಜೆನ್ಸೀಸ್).