Racist Attack: ಬ್ರಿಟನ್ನ ವೊಲ್ಟರ್ ಹ್ಯಾಂಪ್ಟನ್ನ ರೈಲ್ವೆ ನಿಲ್ದಾಣದ ಬಳಿ ಆಗಸ್ಟ್ 15ರಂದು ಜನಾಂಗೀಯ ದಾಳಿ ನಡೆದಿದ್ದು, ಭಾರತೀಯ ಮೂಲದ ಇಬ್ಬರು ಹಿರಿಯ ಸಿಖ್ ಪುರುಷರ ಮೇಲೆ ಸ್ಥಳೀಯ ಮೂವರು ಯುವಕರು ಹಲ್ಲೆ ಮಾಡಿರುವ ವಿಡಿಯೋ ಬಹಿರಂಗವಾಗಿದ್ದು, ವಿಡಿಯೋ ವೈರಲ್ ಆಗಿದೆ ಎಂದು ಮಂಗಳವಾರ(ಆಗಸ್ಟ್ 19) ವರದಿಯಾಗಿದೆ.
ವೈರಲ್ ವಿಡಿಯೋದಲ್ಲಿ ಸಿಖ್ ಪುರುಷರು ನೆಲದ ಮೇಲೆ ಬಿದ್ದಿರುವುದು ಕಾಣುತ್ತಿದೆ. ಹಲ್ಲೆ ಮಾಡ್ತಿರುವ ದುಷ್ಕರ್ಮಿಗಳಲ್ಲಿ ಒಬ್ದ ಅವರನ್ನು ಪದೇ ಪದೇ ಒದೆಯುತ್ತಿರುವುದು ವಿಡಿಯೋದಲ್ಲಿದೆ. ಇನ್ನೊಬ್ಬನು ಅವರನ್ನು ಎಳೆದುಕೊಂಡು ಹೋಗುತ್ತಾನೆ. ಪಕ್ಕದಲ್ಲಿ ಸಿಖ್ರು ಟರ್ಬನ್ ಪೇಟಗಳು ಕಳಚಿ ಬಿದ್ದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹದಿಹರೆಯದವರನ್ನು ಬಂಧಿಸಲಾಗಿತ್ತು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.
ಘಟನೆ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, ಯುಕೆಯ ವೊಲ್ವರ್ ಹ್ಯಾಂಪ್ಟನ್ನಲ್ಲಿ ಇಬ್ಬರು ಸಿಖ್ ವೃದ್ದರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಹಲ್ಲೆ ವೇಳೆ ಒಬ್ಬ ಸಿಖ್ನ ಪೇಟವನ್ನು ಬಲವಂತವಾಗಿ ತೆಗೆಯಲಾಗಿದೆ. ಈ ಜನಾಂಗೀಯ ದ್ವೇಷ ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಸಿಖ್ ಧರ್ಮ ಯಾವಾಗಲೂ ಎಲ್ಲರ ಯೋಗ ಕ್ಷೇಮ ಬಯಸುತ್ತದೆ. ಧಯೆ ಮತ್ತು ಸಹಾನುಭೂತಿಗೆ ಹೆಸರಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣ; ಟೋಲ್ ಪ್ಲಾಜಾಗೆ 20 ಲಕ್ಷ ದಂಡ ವಿಧಿಸಿದ ಎನ್ಹೆಚ್ಎಐ| NHAI
ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಮತ್ತು ಯುಕೆ ಗೃಹ ಕಚೇರಿ ತ್ವರಿತವಾಗಿ ಕಾರ್ಯನಿರ್ವಹಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಸಿಖ್ ವಲಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯುಕೆ ಸರ್ಕಾರದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸುವಂತೆ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಒತ್ತಾಯಿಸುತ್ತೇನೆ. ಏತನ್ಮಧ್ಯೆ, ವಿದೇಶದಲ್ಲಿ ನೆಲೆಸಿರುವ ಎಲ್ಲಾ ಸಿಖ್ ಸಹೋದರರು ಈ ಅಗತ್ಯದ ಸಮಯದಲ್ಲಿ ಪರಸ್ಪರ ಬೆಂಬಲಿಸುವಂತೆ ನಾನು ಮನವಿ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಬ್ರಿಟನ್ ಪೊಲೀಸರು, ಇಂತಹ ನಡುವಳಿಕೆಯನ್ನು ಸಹಿಸುವುದಿಲ್ಲ. ತನಿಖೆ ನಡೆಯುತ್ತಿದ್ದು, ಮೂವರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ, ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಇದ್ದರೆ ತಮಗೆ ವರದಿ ಮಾಡುವಂತೆ ಹೇಳಿದ್ದಾರೆ. (ಏಜೆನ್ಸೀಸ್)