ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡೆದ್ದಿರುವ 40ಕ್ಕೂ ಹೆಚ್ಚು ಶಿವಸೇನಾ ಶಾಸಕರು ತಮ್ಮ ನಾಯಕ ಏಕನಾಥ್ ಶಿಂಧೆ ಜೊತೆಯಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದು, ಉದ್ಧವ್ ಠಾಕ್ರೆ ಸರ್ಕಾರ ಪತನಗೊಳ್ಳುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮುಂಬೈ ನಿವಾಸದ ಹೊರಗಡೆಯೇ ಒಂದು ಬ್ಯಾನರ್ ಕಟ್ಟಲಾಗಿದ್ದು, ಕುತೂಹಲ ಮೂಡಿಸಿದೆ.
ನಿಮ್ಮ ಅಹಂಕಾರವು ಇನ್ನು ನಾಲ್ಕೇ ದಿನವಷ್ಟೇ, ನಮ್ಮ ರಾಜತ್ವವು ಆನುವಂಶಿಕವಾಗಿದೆ ಎಂದು ಬರೆದು ಬ್ಯಾನರ್ ಕಟ್ಟಲಾಗಿದೆ. ಬ್ಯಾನರ್ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಾಳಾಸಾಹೇಬ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್ ಮತ್ತು ಇತರ ಪ್ರಮುಖರ ಚಿತ್ರಗಳಿವೆ. ಶಿವಸೇನೆಯ ಕಾರ್ಪೊರೇಟರ್ ದೀಪಮಲಾ ಬಾಧೆ ಅವರು ಬ್ಯಾನರ್ ಹಾಕಿದ್ದಾರೆ ಎಂದು ಹೇಳಲಾಗಿದೆ.
ಇದರ ನಡುವೆ ಬುಧವಾರ ಮಾತನಾಡಿರುವ ರಾವತ್, ಏಕನಾಥ್ ಶಿಂಧೆ ಅವರೊಂದಿಗೆ ಪಕ್ಷವು ಮಾತುಕತೆ ನಡೆಸುತ್ತಿದೆ. ಬಂಡಾಯವನ್ನು ಶಮನಗೊಳಿಸುವ ಯತ್ನ ನಡೆಯುತ್ತಿದೆ. ಶಿವಸೇನಾವು ಬೂದಿಯಿಂದ ಎದ್ದು ಬರುವ ಸಾಮರ್ಥ್ಯವಿದೆ. ಶಿಂಧೆ, ಶಿವಸೇನಾ ಪಕ್ಷದ ಹಳೆಯ ಸೈನಿಕ. ಶಿಂಧೆ ನಮ್ಮನ್ನು ಬಿಡುವುದಿಲ್ಲ. ನಾವು ಶಿಂಧೆಯನ್ನು ಬಿಡುವುದಿಲ್ಲ ಎಂದು ರಾವತ್ ಹೇಳಿದ್ದಾರೆ.
ರಾಜ್ಯಪಾಲರಿಗೆ ಕೋವಿಡ್ ಸೋಂಕು ತಗುಲಿದೆ. ಹಾಗಾಗಿ ಅಂಕಿ-ಅಂಶಗಳನ್ನು ಕಾದು ನೋಡೋಣ. ಏಕನಾಥ್ ಶಿಂಧೆ ಓರ್ವ ಶಿವಸೈನಿಕ. ಅವರ ಜೊತೆ ಮಾತುಕತೆ ನಡೆಯುತ್ತಿದೆ. ನಾನು ಇಂದು ಬೆಳಿಗ್ಗೆ ಅವರೊಂದಿಗೆ ಒಂದು ಸುತ್ತು ಮಾತುಕತೆ ನಡೆಸಿದ್ದೇನೆ. ಶಿವಸೇನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಮತ್ತು ಅವರು [ಬಂಡಾಯಗಾರರು] ನಮ್ಮೊಂದಿಗೆ ಇರುತ್ತಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಇಂದು ಸೂರತ್ ಹೋಟೆಲ್ ಬಿಟ್ಟು 7 ಗಂಟೆಗೆ ಗುವಾಹಟಿಗೆ ತಲುಪಿದ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ತಂಡವನ್ನು ಬಿಜೆಪಿ ನಾಯಕರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಏಕನಾಥ್ ಶಿಂದೆ, ಒಟ್ಟು 40 ಶಿವಸೇನಾ ಶಾಸಕರು ಇಲ್ಲಿದ್ದೇವೆ. ನಾನು ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವವನ್ನು ಮುನ್ನಡೆಸುಕೊಂಡು ಹೋಗುತ್ತೇವೆ ಎಂದಿದ್ದಾರೆ.
ಇದಕ್ಕೂ ಮುನ್ನ ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಂಧೆ, ನಾವು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ಬಿಟ್ಟಿಲ್ಲ ಮತ್ತು ಅದನ್ನು ಬಿಡುವುದಿಲ್ಲ, ನಾವು ಬಾಳಾಸಾಹೇಬ್ ಅವರ ಹಿಂದುತ್ವವನ್ನು ಅನುಸರಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬೇಕು ಎಂಬುದು ನನ್ನ ಮತ್ತು ಶಿವಸೇನೆ ಶಾಸಕರ ಆಶಯವಾಗಿದೆ, ನಾನು ಪಕ್ಷವನ್ನು ತೊರೆದಿಲ್ಲ ಎಂದು ಶಿಂಧೆ ಇದಕ್ಕೂ ಮುನ್ನವೇ ಮಾಧ್ಯಮವೊಂದಕ್ಕೆ ತಿಳಿಸಿದ್ದರು.
ಸದ್ಯ ಮಹಾರಾಷ್ಟ್ರ ರಾಜಕೀಯದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಮುಂದೆ ಯಾವ ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)