ನ್ಯೂಸ್

ವರ ಬೇಕಿದ್ದಾನೆ, ಬಹುಪತ್ನಿತ್ವ ಸ್ವೀಕರಿಸಲೂ ನಾನು ಸಿದ್ಧ: ಪೋಸ್ಟರ್​ ಹಿಡಿದು ಬೀದಿ ಬೀದಿ ಅಲೆಯುತ್ತಿರುವ ಯುವತಿ!

ದುಬೈ: ಸುಡಾನ್​​​ ಮೂಲದ ಯುವತಿಯೊಬ್ಬಳು ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ. ವರ ಬೇಕು ಎಂಬ ಭಿತ್ತಿ ಫಲಕವನ್ನು ಹಿಡಿದು ಸುಡಾನ್​ನ ರಾಜಧಾನಿ ಖಾರ್ಟೂಮ್​ನ ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್​ ಆಗಿದೆ. ಅದರಲ್ಲಿ ಯುವತಿ ಟ್ರಾಫಿಕ್​ ಸಿಗ್ನಲ್​ ಬಳಿ ಭಿತ್ತಿ ಫಲಕ ಹಿಡಿದು ನಿಂತಿದ್ದಾಳೆ. ನನಗೆ ವರ ಬೇಕಿದ್ದಾನೆ. ನಾನು ಮದುವೆಯಾಗಬೇಕಿದೆ. ನಾನು ಬಹುಪತ್ನಿತ್ವ ಸ್ವೀಕರಿಸಲೂ ಸಿದ್ಧಳಾಗಿದ್ದೇನೆ ಎಂಬ ಬರಹ ಯುವತಿ ಹಿಡಿದಿರುವ ಭಿತ್ತಿ ಫಲಕದಲ್ಲಿದೆ. ಅಲ್ಲದೆ, ಮೊಬೈಲ್​ ನಂಬರ್​ ಕೂಡ ಅದರಲ್ಲಿದೆ.

ಫೋಟೋ ವೈರಲ್​ ಆಗುತ್ತಿದ್ದಂತೆ ಯುವತಿ ಬಹು ಚರ್ಚೆಯ ವಿಷಯವಾಗಿದ್ದಾಳೆ. ಕಳೆದ ಕೆಲವು ವರ್ಷಗಳಿಂದ, ಸುಡಾನ್​ನಲ್ಲಿ ಮದುವೆ ದರದಲ್ಲಿ ಗಮನಾರ್ಹ ಕುಸಿತ ಮತ್ತು ವಿಚ್ಛೇದನಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ವರದಿಯಾಗಿದೆ.

ಸುಡಾನ್​ನಲ್ಲಿ 2020ರಲ್ಲಿ ಮದುವೆ ದರವು 2018ಕ್ಕೆ ಹೋಲಿಸಿದರೆ ಶೇಕಡ 21 ರಷ್ಟು ಕಡಿಮೆಯಾಗಿದೆ. 2018ರಲ್ಲಿ 1,80,563 ಮದುವೆ ನೋಂದಣಿಯಾಗಿದ್ದವು. ಈ ಸಂಖ್ಯೆಗೆ ಹೋಲಿಸಿದರೆ 2020ರಲ್ಲಿ 142,949 ವಿವಾಹಗಳು ನಡೆದಿದ್ದು, ಕುಸಿತ ಕಂಡಿದೆ. ತಜ್ಞರ ಪ್ರಕಾರ, ಸುಡಾನ್‌ನಲ್ಲಿನ ಕೆಟ್ಟ ಆರ್ಥಿಕ ಪರಿಸ್ಥಿತಿ ಮತ್ತು ಸಾಂಕ್ರಾಮಿಕದ ಪ್ರಭಾವ ಸೇರಿದಂತೆ ಹಲವು ಕಾರಣಗಳು ದೊಡ್ಡ ಕುಸಿತಕ್ಕೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಕಳೆದ ವರ್ಷ ಸುಡಾನ್ ನ್ಯಾಯಾಂಗ ಇಲಾಖೆಯಿಂದ ಆಘಾತಕಾರಿ ಅಂಕಿ-ಅಂಶಗಳು ಹೊರಬಿದ್ದಿದ್ದು, ಸುಡಾನ್‌ನಲ್ಲಿ ಪ್ರತಿ ಗಂಟೆಗೆ ಏಳು ವಿಚ್ಛೇದನಗಳು ಸಂಭವಿಸುತ್ತವೆ. 2020 ರಲ್ಲಿ ಡಿವೋರ್ಸ್​ ಪ್ರಕರಣಗಳ ಸಂಖ್ಯೆ 60,000 ಕ್ಕಿಂತ ಹೆಚ್ಚಿವೆ. (ಏಜೆನ್ಸೀಸ್​)