ಮುಂಬೈ: ನಮ್ಮ ಭಾರತದ ಕಾಡುಗಳು ವೈವಿಧ್ಯಮಯ ಅದ್ಭುತಗಳಿಂದ ತುಂಬಿವೆ. ನಮ್ಮ ಅರಣ್ಯ ಪ್ರದೇಶಗಳಲ್ಲಿ ಆಶ್ಚರ್ಯಗಳಿಗೇನೂ ಕೊರತೆಯಿಲ್ಲ, ಏಕೆಂದರೆ ಭಾರತವು ಸಸ್ಯ ಮತ್ತು ಪ್ರಾಣಿಗಳ ಶ್ರೇಷ್ಠ ನೆಲೆಯಾಗಿದೆ. ಹೀಗಾಗಿಯೇ ಆಗಾಗ ಪ್ರಾಣಿ-ಪಕ್ಷಿಗಳ ಅದ್ಭುತ ಫೋಟೋ-ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಒಂದೇ ಫೋಟೋದಲ್ಲಿ ಮೂರು ನಾಗರಹಾವುಗಳ ಸರೆಯಾಗಿರುವ ಅದ್ಭುತ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನೆ ಇಂಡಿಯನ್ ವೈಲ್ಡ್ ಲೈಫ್ ಹೆಸರಿನ ಫೇಸ್ಬುಕ್ ಗ್ರೂಪ್ನಲ್ಲಿ ನಾಗರಹಾವುಗಳ ಫೋಟೋಗಳು ಮೊದಲು ಕಾಣಿಸಿಕೊಂಡಿವೆ. ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ನಂತರ ಅವುಗಳ ಫೋಟೋವನ್ನು ಕ್ಲಿಕ್ಕಿಸಲಾಗಿದೆ ಎಂದು ವರದಿಯಾಗಿದೆ. ರಾಜೇಂದ್ರ ಸೆಮಾಲ್ಕರ್ ಎಂಬ ಫೇಸ್ಬುಕ್ ಬಳಕೆದಾರರು ಅಮರಾವತಿ ಜಿಲ್ಲೆಯ ಹರಿಸಾಲ್ ಅರಣ್ಯದಲ್ಲಿ ಮರದ ಕಾಂಡದ ಸುತ್ತಲೂ ಮೂರು ನಾಗರಹಾವುಗಳು ಸುತ್ತಿಕೊಂಡಿರುವ ಫೋಟೋಗಳ ಸರಣಿಯನ್ನು ಪೋಸ್ಟ್ ಮಾಡಿದ್ದಾರೆ. ಹರಿಸಲ್ ಕಾಡಿನ ಮ್ಯಾಜಿಕಲ್ ಮೆಲ್ಘಾಟ್ನಲ್ಲಿ 3 ನಾಗರಹಾವುಗಳನ್ನು ಗುರುತಿಸಲಾಗಿದೆ ಎಂದು ಸೆಮಾಲ್ಕರ್ ಬರೆದುಕೊಂಡಿದ್ದು, ಈ ಪೋಸ್ಟ್ ಅನ್ನು 4,700ಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ.
ಐಎಫ್ಎಸ್ ಅಧಿಕಾರಿ ಸುಸಾಂತ್ ನಂದಾ ಕೂಡ ಕೋಬ್ರಾ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಫೋಟೋ ಕೃಪೆಯನ್ನು ಸೆಮಾಲ್ಕರ್ ಅವರಿಗೆ ನೀಡಿದ್ದಾರೆ. ಒಂದೇ ಸಮಯದಲ್ಲಿ ಮೂರು ಕೋಬ್ರಾಗಳು ಆಶೀರ್ವದಿಸಿದಾಗ ಎಂದು ಫೋಟೋಗೆ ಸುಸಾಂತ್ ಅವರು ಅಡಿಬರಹ ಬರೆದುಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೋಬ್ರಾಗಳ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ದೃಶ್ಯ ಜೀವಮಾನದಲ್ಲಿ ಒಮ್ಮೆ ನೋಡಲು ಸಿಗುವಂತಹದ್ದು ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)