ವಿಜಯನಗರ: ಅಪರಿಚಿತ ಯುವತಿಯೊಬ್ಬಳು ಡ್ರಾಪ್ ಕೇಳಿದಳು ಅಂತಾ ಬೈಕ್ ನಿಲ್ಲಿಸಿ ಆಕೆಯನ್ನು ಕೂರಿಸಿಕೊಂಡು ಹೋದ ಯುವಕನಿಗೆ ಮರುಕ್ಷಣದಲ್ಲೇ ಕಾದಿತ್ತೊಂದು ಭಾರೀ ಆಘಾತ. ಈ ಘಟನೆ ಆಂಧ್ರ ಪ್ರದೇಶದ ವಿಜಯನಗರದಲ್ಲಿ ನಡೆದಿದ್ದು, ಯುವತಿ ಹಾಕಿದ್ದ ಬಲೆಗೆ ಯುವಕ ಸುಲಭ ತುತ್ತಾಗಿದ್ದಾನೆ.
ವಿವರಣೆಗೆ ಬರುವುದಾದರೆ, ವಿಜಯನಗರದಿಂದ ಗಜಪತಿನಗರದ ಕಡೆಗೆ ಬೈಕ್ನಲ್ಲಿ ಬರುತ್ತಿದ್ದ ಯುವಕನ ಬಳಿ ಯುವತಿಯೊಬ್ಬಳು ಡ್ರಾಪ್ ಕೇಳಿದ್ದಾಳೆ. ಹುಡುಗಿ ತಾನೇ ಅಂದುಕೊಂಡು ಬೈಕ್ ನಿಲ್ಲಿಸಿ ಆಕೆಯನ್ನು ಕೂರಿಸಿಕೊಂಡಿದ್ದಾನೆ. ಬಳಿಕ ದವಳಪೇಟೆ ಸೇತುವೆ ಬಳಿಕ ಬೈಕ್ ನಿಲ್ಲಿಸುವಂತೆ ಹೇಳುತ್ತಾಳೆ. ಬಳಿಕ ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿ ಬೈಕ್ ಅನ್ನು ಕೆಳಗಡೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾಳೆ. ಸರಿ ಅಂತ ಆತ ಕೆಳಗಡೆ ತೆಗೆದುಕೊಂಡು ಹೋಗುತ್ತಾನೆ. ಬಳಿಕ ಬೈಕ್ನಿಂದ ಕೆಳಗಿಳಿಯುವ ಯುವತಿ ಯುವಕನನ್ನು ಬೆದರಿಸಿ ಆತನಿಂದ ಚಿನ್ನದ ಸರವನ್ನು ಕಸಿದುಕೊಂಡು ಅಲ್ಲಿಂದ ಪರಾರಿಯಾಗುತ್ತಾಳೆ.
ಇದಾದ ಬಳಿಕ ಸಂತ್ರಸ್ತ ಯುವಕ ಜೋರಾಗಿ ಕೂಗಿಕೊಳ್ಳುತ್ತಾನೆ. ಅದನ್ನು ಕೇಳಿದ ಸ್ಥಳೀಯರು ಓಡಿ ಬಂದು ನೋಡಿದಾಗ ಆತ ಹೇಳಿದನ್ನು ಕೇಳಿ, ಯುವತಿ ಓಡಿ ಹೋಗುತ್ತಿರುವುದನ್ನು ನೋಡಿ ಆಕೆಯನ್ನು ಹಿಡಿದುಕೊಳ್ಳುತ್ತಾರೆ. ತಕ್ಷಣ ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸುತ್ತಾರೆ. ಇಂಥಾ ಹುಡುಗಿಯರು ಇರ್ತಾರಾ ಎಂದು ಸ್ಥಳೀಯರು ಹುಬ್ಬೇರಿಸಿದ್ದೂ ಉಂಟು.
ಅಂದಹಾಗೆ ಸಂತ್ರಸ್ತ ಯುವಕ ಹಣಕಾಸು ವ್ಯವಹಾರಸ್ಥ. ವಿಜಯನಗರದಲ್ಲಿ ವಾಸವಿದ್ದ ಆತ ಪ್ರತಿನಿತ್ಯ ಗಜಪತಿನಗರಕ್ಕೆ ಭೇಟಿ ನೀಡುತ್ತಿದ್ದ. ಈ ವಿಚಾರ ಆರೋಪಿ ಯುವತಿಗೆ ಮೊದಲೇ ತಿಳಿದಿತ್ತು. ಬಳಿಕ ಆತನ ಸುಲಿಗೆ ನಡೆಸಲು ಸಂಚು ರೂಪಿಸಿದ್ದಳು. ಕೊನೆಗೂ ತನ್ನ ಸಂಚನ್ನು ಕಾರ್ಯರೂಪಕ್ಕಿಳಿಸಿದ ಯುವತಿ, ಯುವಕನಿಂದ ಭಾರೀ ಮೌಲ್ಯದ ಚಿನ್ನದ ಸರವನ್ನು ಎಗರಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಇದೇ ಮೊದಲೇನಲ್ಲ ಈಕೆ ಈ ಹಿಂದೆ ಅನೇಕ ಸರಗಳ್ಳತನ ಮಾಡಿರುವ ಉದಾಹರಣೆಗಳಿವೆ. ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆಕೆಯ ದುಷ್ಕೃತ್ಯ ಬಯಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)