More

    ಸತ್ತವರು ಹೇಗೆ ಪ್ರಮಾಣಪತ್ರ ನೀಡುತ್ತಾರೆ!; ನಿಯಮಾವಳಿಗೆ ಹೈಕೋರ್ಟ್ ಗರಂ

    | ಜಗನ್ ರಮೇಶ್ ಬೆಂಗಳೂರು

    ನನ್ನ ಜತೆ ಜೈಲುವಾಸ ಅನುಭವಿಸಿದವರಲ್ಲಿ ಕೇವಲ ಒಬ್ಬ ಬದುಕುಳಿದಿದ್ದು, ಇತರ ಸಹಬಂಧಿಗಳು ಮೃತಪಟ್ಟಿದ್ದಾರೆ ಎಂದು 2021ರ ಜ.20ರಂದು ಅರ್ಜಿದಾರ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿದ್ದರೂ, ಇಬ್ಬರು ಸಹಬಂಧಿಗಳಿಂದ ಪ್ರಮಾಣಪತ್ರ ತರುವಂತೆ ಒತ್ತಾಯಿಸುವುದು ಮೃತ ದೇಹಗಳನ್ನು ಸಮಾಧಿಯಿಂದ ಹೊರತೆಗೆದು, ಅದಕ್ಕೆ ಜೀವ ತುಂಬಿ, ಪ್ರಮಾಣಪತ್ರ ಪಡೆಯಬೇಕು ಎನ್ನುವಂತಿದೆ ಎಂದು ಸರ್ಕಾರದ ನಿಯಮಕ್ಕೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಶಾಸನಗಳು ವಿಧಿಸಿರುವ ಷರತ್ತುಗಳನ್ನು ಪಾಲಿಸುವುದು ಅಸಾಧ್ಯವೆನಿಸಿದಾಗ ಅವುಗಳನ್ನು ಪಾಲನೆ ಮಾಡಲಾಗಿದೆ ಎಂದೇ ಪರಿಗಣಿಸಬೇಕಾಗುತ್ತದೆ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನಿಯಮ ಪಾಲನೆಯಾಗಿಲ್ಲ ಎಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಪಿಂಚಣಿ ನಿರಾಕರಿಸಿ ಸರ್ಕಾರ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿ, ಗೌರವಧನ ಕೊಡಲು ಆದೇಶಿಸಿದೆ.

    ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಗೌರವಧನ ಮಂಜೂರು ಮಾಡಲು ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಬಳ್ಳಾರಿ ಜಿಲ್ಲೆಯ ಕಮಲಾಪುರದ ನಿವಾಸಿ 94 ವರ್ಷದ ಗುಂಡೂರಾವ್ ದೇಸಾಯಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ನೀಡಿದೆ. 1998ರ ಮಾ.19ರಿಂದ ಪೂರ್ವಾನ್ವಯವಾಗುವಂತೆ ಅರ್ಜಿದಾರರಿಗೆ ಪಿಂಚಣಿಯನ್ನು ಎಲ್ಲ ಹಿಂಬಾಕಿಗಳೊಂದಿಗೆ ಪಾವತಿಸಬೇಕು ಎಂದು ಗೃಹ ಇಲಾಖೆ, ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಹೊಸಪೇಟೆ ಸಹಾಯಕ ಆಯುಕ್ತರಿಗೆ ನಿರ್ದೇಶಿಸಿದೆ. ಪಿಂಚಣಿಯನ್ನು 6 ವಾರಗಳ ಒಳಗೆ ಪಾವತಿಸಬೇಕು. ತಪ್ಪಿದರೆ, ಪ್ರತಿ ದಿನದ ವಿಳಂಬಕ್ಕೆ ತಲಾ 1 ಸಾವಿರ ರೂ. ಗಳಂತೆ ಪಾವತಿಸಬೇಕು ಎಂದು ಪೀಠ ಸೂಚಿಸಿದೆ.

    ಸರ್ಕಾರದ ವಾದವೇನು?: ಸರ್ಕಾರದ ನೀತಿಯ ಅನುಸಾರ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಪಡೆಯಲು ಕೆಲ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕಿದೆ. ಅರ್ಜಿದಾರರು ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣದಿಂದಲೇ ಗೌರವ ಧನ ನೀಡಬೇಕೆಂಬ ಮನವಿ ತಿರಸ್ಕರಿಸಿ ಹಿಂಬರಹ ನೀಡಲಾಗಿದೆ. ಗೌರವಧನ ನೀಡುವ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇರುವುದರಿಂದ, ದಾಖಲೆಗಳನ್ನು ಒದಗಿಸುವ ವಿಚಾರದಲ್ಲಿ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.

    ಪ್ರಕರಣವೇನು?: ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಗೌರವಧನ ಪಾವತಿಸುವಂತೆ 1998ರಿಂದಲೂ ಗುಂಡೂರಾವ್ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಅದೇ ರೀತಿ 2019ರ ಮೇ 26ರಂದು ಮತ್ತೊಂದು ಪತ್ರ ಸಲ್ಲಿಸಿ, ಪಿಂಚಣಿಗಾಗಿ ಮನವಿ ಮಾಡಿದ್ದ ಅವರು, ಮನವಿಯೊಂದಿಗೆ ತಮ್ಮ ಜತೆ ಜೈಲುವಾಸದಲ್ಲಿದ್ದ ಓರ್ವ ಸಹಬಂಧಿಯ ಪ್ರಮಾಣಪತ್ರವನ್ನು ಒದಗಿಸಿದ್ದರು. ಆದರೆ, ಗೌರವಧನ ಪಡೆಯಲು ಅಗತ್ಯವಿರುವ ದಾಖಲೆಗಳಲ್ಲಿ 1 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಇಬ್ಬರು ಸ್ವಾತಂತ್ರ್ಯ ಯೋಧರಿಂದ ಪಡೆದಿರುವ ಮೂಲ ಸಹಬಂಧಿ ಪ್ರಮಾಣಪತ್ರಗಳನ್ನು ಒದಗಿಸಬೇಕಾಗುತ್ತದೆ. ಆದರೆ, ಗುಂಡೂರಾವ್ ಒಬ್ಬ ಸಹಬಂಧಿ ಪ್ರಮಾಣಪತ್ರವನ್ನಷ್ಟೇ ಒದಗಿಸಿದ್ದರು.

    ಸರ್ಕಾರದ ನಡೆಗೆ ಕೋರ್ಟ್ ಬೇಸರ: ಅರ್ಜಿದಾರರು ಗೌರವಧನಕ್ಕಾಗಿ 1998ರ ಮಾ.19ರಂದು ಮೊದಲು ಮನವಿ ಸಲ್ಲಿಸಿದ್ದಾರೆ. ಆನಂತರ 2 ದಶಕಗಳೇ ಕಳೆದು ಹೋಗಿದೆ. ಆದರೆ, ಅವರ ಕಡತ ಸರ್ಕಾರಿ ಕಚೇರಿಯ ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಅಲೆದಾಡಿದೆಯೇ ಹೊರತು, ಬೇರೇನೂ ಆಗಿಲ್ಲ. ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ಕಣ್ಣುಮುಚ್ಚಿದ್ದು, ಸದ್ಯ ಅವರು ನಶಿಸುತ್ತಿರುವ ವರ್ಗಕ್ಕೆ ಸೇರಿದವರಾಗಿದ್ದಾರೆ. ಅಂಥವರ ರಕ್ಷಣೆಗಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಗಳಲ್ಲಿ ವಿವೇಚನಾರಹಿತ, ಅಸಾಧ್ಯವಾಗಿರುವ ಅವಶ್ಯಕತೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದು ಸಮಂಜಸವಲ್ಲ ಎಂದು ನ್ಯಾಯಪೀಠ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts