ನ್ಯೂಸ್

VIDEO| ಕಾರು ನುಂಗಿದ ಸಿಂಕ್​ ಹೋಲ್​​: ಆತಂಕಕಾರಿ ವಿಡಿಯೋ ವೈರಲ್​!

ಮುಂಬೈ: ಪಾರ್ಕ್​ ಮಾಡಿದ್ದ ಕಾರನ್ನು ಕೆಲವೇ ಸೆಕೆಂಡ್​ಗಳಲ್ಲಿ ಸಿಂಕ್​ಹೋಲ್ ನುಂಗಿದ ಘಟನೆ ವಾಣಿಜ್ಯ ನಗರಿ ಮುಂಬೈನ ವಸತಿ ಸಂಕೀರ್ಣದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ನಿರ್ಮಾಣವಾದ ಸಿಂಕ್​ಹೋಲ್​ನಿಂದ ಅವಘಡ ಸಂಭವಿಸಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಅಂದಹಾಗೆ ಈ ವಿಚಿತ್ರ ಘಟನೆ ಮುಂಬೈನ ಘಾಟ್ಕೋಪರ್​ ಏರಿಯಾದಲ್ಲಿ ನಡೆದಿದೆ. ವಿಡಿಯೋದಲ್ಲಿರುವಂತೆ ಕಾರಿನ ಬಾನೆಟ್​ ಮತ್ತು ಮುಂದಿನ ಚಕ್ರಗಳನ್ನು ಮೊದಲು ನುಂಗಿದ ಸಿಂಕ್​ ಹೋಲ್​ ನಂತರ ಇಡೀ ಕಾರನ್ನು ತನ್ನೊಳಗೆ ಸೆಳೆದುಕೊಳ್ಳುತ್ತದೆ.

ಸಿಂಕ್​ ಹೋಲ್​ಗೆ ಆಹುತಿಯಾದ ಕಾರಿನ ಎಡ ಹಾಗೂ ಬಲದಲ್ಲಿ ಒಂದೊಂದು ಕಾರುಗಳಿದ್ದವು. ಆದರೆ, ಅವುಗಳಿಗೆ ಯಾವುದೇ ಹಾನಿಯಾಗಿಲ್ಲ. ಇದೀಗ ವಿಡಿಯೋ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದ್ದು, ನೆಟ್ಟಿಗರು ಭಾರೀ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಕರಾವಳಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಸಮುದ್ರಕ್ಕೆ ಹೊಂದಿಕೊಂಡಿರುವ ಮುಂಬೈ ನಗರದಲ್ಲಿ ಮುಂಗಾರು ಅಬ್ಬರಿಸುತ್ತಿದೆ. ಹೀಗಾಗಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ.

ವೀಕೆಂಡ್​ನಲ್ಲಿ ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೊದಲೇ ಎಚ್ಚರಿಕೆ ನೀಡಿದೆ. ಶನಿವಾರ ಆರೆಂಜ್​ ಅಲರ್ಟ್ ಹಾಗೂ ಭಾನುವಾರ ರೆಡ್​ ಅಲರ್ಟ್​​ ಘೋಷಿಸಲಾಗಿದೆ. ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ನಗರದಲ್ಲಿ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. (ಏಜೆನ್ಸೀಸ್​)