ನ್ಯೂಸ್

ಯೂಕ್ರೇನ್​-ರಷ್ಯಾ ಯುದ್ಧದ ಬಗ್ಗೆ US ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಕೊಟ್ಟ ಹೇಳಿಕೆಗೆ ಭಾರೀ ಆಕ್ರೋಶ!

ವಾಷಿಂಗ್ಟನ್​: ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧದ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾರೆ.

"ಮಾರ್ನಿಂಗ್​ ಹಸಲ್​" ಹೆಸರಿನ ಬಾನುಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮಲಾಗೆ ಪ್ರಸ್ತುತ ನಡೆಯುತ್ತಿರುವ ರಷ್ಯಾ-ಯೂಕ್ರೇನ್​ ಯುದ್ಧದ ಬಗ್ಗೆ ಮಾತನಾಡುವಂತೆ ಕೇಳಲಾಯಿತು. ಈ ವೇಳೆ ಕಮಲಾ ಅವರು ಮಾತನಾಡಿದ ರೀತಿ ಎಲ್ಲರನ್ನು ಚಕಿತಗೊಳಿಸಿದೆ. ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಬೀರುತ್ತಿದ್ದರೆ, ಅದರ ಬಗ್ಗೆ ಕಮಲಾ ತುಂಬಾ ಹಗುರವಾಗಿ ಮಾತನಾಡಿದ್ದಾರೆ.

ಯೂಕ್ರೇನ್​, ಯೂರೋಪ್​ನಲ್ಲಿರುವ ಒಂದು ದೇಶ. ಸಮೀಪದ ರಾಷ್ಟ್ರ ರಷ್ಯಾ ಪಕ್ಕದಲ್ಲೇ ಯೂಕ್ರೇನ್​ ಇದೆ. ರಷ್ಯಾ ಒಂದು ದೊಡ್ಡ ರಾಷ್ಟ್ರ. ಅಲ್ಲದೆ, ಬಲಿಷ್ಠ ದೇಶವೂ ಹೌದು. ಸಣ್ಣ ರಾಷ್ಟ್ರ ಯೂಕ್ರೇನ್​ ಮೇಲೆ ಆಕ್ರಮಣ ಮಾಡಲು ನಿರ್ಧರಿಸಿದೆ. ಸಾಮಾನ್ಯವಾಗಿ ಇದು ತಪ್ಪು ಮತ್ತು ಇದು ನಮ್ಮ ನಿಲುವಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಯೂಕ್ರೇನ್​ ಮೇಲಿನ ರಷ್ಯಾ ದಾಳಿಯ ಬಗ್ಗೆ ಕಮಲಾ ಇಷ್ಟೊಂದು ಸುಲಭವಾಗಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಕಮಲಾ ಅವರು ಅಸಂಬದ್ಧವಾಗಿ ಮತ್ತು ಅಸಮರ್ಥತೆಯ ಮಾತುಗಳನ್ನು ಹಾಡಿದ್ದಾರೆ. ಇದು ಅವರ ತಿಳುವಳಿಕೆಯ ಮಟ್ಟವನ್ನು ತೋರುತ್ತದೆ. ಯುದ್ಧ ಭೀಕರತೆ ಅರಿಯದೇ ಅದನ್ನು ಇಷ್ಟು ಹಗುರವಾಗಿ ಮಾತನಾಡುವು ತರವಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)