ನ್ಯೂಸ್

ಹಿಂದು ದೇವರ ಫೋಟೋ ಇರುವ ಪೇಪರ್​ನಲ್ಲಿ ಮಾಂಸ ಪ್ಯಾಕಿಂಗ್​: ಅನ್ಯಧರ್ಮದ ವ್ಯಕ್ತಿಯ ಬಂಧನ

ಸಂಭಲ್​​: ಹಿಂದು ದೇವರ ಚಿತ್ರವಿರುವ ಪೇಪರ್​ನಲ್ಲಿ ಮಾಂಸವನ್ನು ಪ್ಯಾಕಿಂಗ್ ಮಾಡಿಕೊಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಅನ್ಯಧರ್ಮದ ಚಿಕನ್​ ಮಾರಾಟಗಾರನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಸಂಭಲ್​ನಲ್ಲಿ ನಡೆದಿದೆ. ​

ಈ ಘಟನೆ ಭಾನುವಾರ ನಡೆದಿದೆ. ಬಂಧಿತ ಆರೋಪಿಯನ್ನು ತಾಲಿಬ್​ ಹುಸೇನ್​ ಎಂದು ಗುರುತಿಸಲಾಗಿದೆ. ಈತ ಹಿಂದು ದೇವರ ಚಿತ್ರವಿರುವ ಪೇಪರ್​ನಲ್ಲಿ ಮಾಂಸದ ಪ್ಯಾಕಿಂಗ್​ ಮಾಡಿ ಮಾರಾಟ ಮಾಡುತ್ತಿದ್ದಾನೆ ಎಂದು ಕೆಲವು ಮಂದಿ ದೂರು ನೀಡಿದ ಬಳಿಕ ಆತನನ್ನು ಬಂಧಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ದೂರು ಸ್ವೀಕರಿಸಿದ ಬಳಿಕ ಪೊಲೀಸರು ಹುಸೇನ್​ ಶಾಪ್​ಗೆ ತೆರಳಿದ್ದಾರೆ. ಈ ವೇಳೆ ಆರೋಪಿ ಹುಸೇನ್​ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆಗೆ ಮುಂದಾಗಿದ್ದಾನೆ ಎಂದು ಪೊಲೀಸರು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ತಾಲಿಬ್​​​​ ಹುಸೇನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಮೂಲಕ ಆಕ್ರೋಶಗೊಳಿಸುವ ಉದ್ದೇಶ) ಮತ್ತು 307 (ಕೊಲೆಯ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)