ನ್ಯೂಯಾರ್ಕ್: ಯೂಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಭಾರೀ ಕಳವಳಕಾರಿಯಾಗಿದ್ದು, ಇಂದು (ಫೆ.22) ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತುಸಭೆ ನಡೆಸಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದೆ. ಈ ವೇಳೆ ಅನೇಕ ರಾಷ್ಟ್ರಗಳು ಯೂಕ್ರೇನ್ ವಿಚಾರದಲ್ಲಿ ರಷ್ಯಾ ನಡೆಯನ್ನು ಖಂಡಿಸಿದ್ದು, ಶಾಂತಿ ಕಾಪಾಡಲು ಆಗ್ರಹಿಸಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೆಗೆದುಕೊಂಡಿರುವ ನಿರ್ಧಾರ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಯೂಕ್ರೇನ್ನಲ್ಲಿ ಬಂಡಾಯ ಎದ್ದಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಲಯಗಳನ್ನು ಪುಟಿನ್ ಸ್ವತಂತ್ರ ರಾಜ್ಯಗಳೆಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, ಈ ಸಂಬಂಧ ಸುಗ್ರೀವಾಜ್ಞೆಗೂ ಸಹ ಸಹಿ ಹಾಕಿದ್ದು, ಎರಡು ರಾಜ್ಯಗಳಿಗೆ ತಕ್ಷಣ ರಷ್ಯಾ ಸೇನೆ ತೆರಳುವಂತೆ ಆದೇಶಿಸಿದೆ. ಇನ್ನೊಂದೆಡೆ ರಷ್ಯಾ ನಿರ್ಧಾರವನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಬಂಡಾಯ ಎದ್ದಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಲಯಗಳಿಗೆ ಆರ್ಥಿಕ ಸಹಾಯವನ್ನು ನಿರ್ಬಂಧಿಸಿದ್ದಾರೆ.
ಭದ್ರತಾ ಮಂಡಳಿಯಲ್ಲಿ ಭಾರತ ಪರವಾಗಿ ಮಾತನಾಡಿದ ಟಿ.ಎಸ್. ತಿರುಮೂರ್ತಿ, ರಷ್ಯಾ-ಯೂಕ್ರೇನ್ ಸಂಘರ್ಷವನ್ನು ತಗ್ಗಿಸುವುದೇ ತಕ್ಷಣದ ಆದ್ಯತೆಯಾಗಿದೆ. ನಾವು ಮಿಲಿಟರಿ ಏರಿಕೆಯನ್ನು ಒದಗಿಸುವುದಿಲ್ಲ ಮತ್ತು ಎಲ್ಲ ಕಡೆಗಳಿಂದಲೂ ಸಂಯಮ ಕಾಯ್ದುಕೊಳ್ಳುವುದು ಒಳಿತು ಹಾಗೂ ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಭಾರತೀಯರ ಸುರಕ್ಷತೆಯೂ ಕೂಡ ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಯುನೈಟೆಡ್ ಕಿಂಗ್ಡಮ್ ಕೂಡ ರಷ್ಯಾ ನಡೆಯನ್ನು ಟೀಕಿಸಿದ್ದು, ತಕ್ಷಣ ಯೂಕ್ರೇನ್ನಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿದೆ. ವಿಶ್ವದ ಶಾಂತಿಗೆ ಭಂಗ ತರುವಂತಹ ರಷ್ಯಾದ ಕ್ರಮ ಸ್ವೀಕಾರ್ಹವಲ್ಲ ಮತ್ತು ಅದನ್ನು ಸಹಿಸಲು ಆಗುವುದಿಲ್ಲ. ನಾನು ಇಂದು ಅಧ್ಯಕ್ಷ ಯೂಕ್ರೇನ್ ಅಧ್ಯಕ್ಷ ವಾಂಡರ್ ಲೆಯೆನ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ನಮ್ಮ ಬಲವರ್ಧಿತ ಬದ್ಧತೆಯನ್ನು ನಾವು ದೃಢಪಡಿಸಿದ್ದೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಯೂಕ್ರೇನಿಯನ್ ರಾಯಭಾರಿ ಸೆರ್ಗಿ ಕಿಸ್ಲಿತ್ಸ್ಯ, ನಾವು ಶಾಂತಿಯನ್ನು ಬಯಸುತ್ತೇವೆ ಮತ್ತು ನಮ್ಮ ಕಾರ್ಯಗಳಲ್ಲಿ ನಾವು ಸ್ಥಿರವಾಗಿರುತ್ತೇವೆ. ರಾಜಕೀಯ ಮತ್ತು ರಾಜತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಯಾವುದೇ ಪ್ರಚೋದನೆಗಳಿಗೆ ಬಲಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ರಷ್ಯಾ ಒಕ್ಕೂಟದ ಪ್ರತಿನಿಧಿ ಹಾಗೂ 2022ರ ಫೆಬ್ರವರಿಯಲ್ಲಿ ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುವ ವಾಸಿಲಿ ನೆವೆಂಜ್ಯಾ, ರಿಪಬ್ಲಿಕ್ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳ ಜನರ ಹಕ್ಕನ್ನು ಎತ್ತಿಹಿಡಿಯಬೇಕಾಗಿದೆ ಎಂದು ಹೇಳುವ ಮೂಲಕ ರಷ್ಯಾದ ನಿಲುವನ್ನು ಸಮರ್ಥಿಸಿಕೊಂಡಿದೆ.
ರಷ್ಯಾದ ಬೆನ್ನಿಗೆ ನಿಂತಿದೆ ಎಂಬ ಅಪವಾದ ಹೊತ್ತಿರುವ ಚೀನಾ ಕೂಡ ಭದ್ರತಾ ಸಭೆಯಲ್ಲಿ ಮಾತನಾಡಿ, ಎಲ್ಲ ಕಡೆಗಳಿಂದಲೂ ಸಂಯಮ ಕಾಯ್ದುಕೊಳ್ಳುವಂತೆ ಕರೆ ನೀಡಿದೆ. (ಏಜೆನ್ಸೀಸ್)