ಕೀಯೆವ್/ಮಾಸ್ಕೋ: ಯೂಕ್ರೇನ್ ಮತ್ತು ರಷ್ಯಾ ನಡುವಿನ ಸಂಧಾನ ಮಾತುಕತೆ ವಿಫಲವಾಗಿದ್ದು, ಯುದ್ಧದ ಅನಿಶ್ಚಿತತೆ ಮುಂದುವರಿದಿದೆ. ಯೂಕ್ರೇನ್ ಮೇಲೆ ರಷ್ಯಾ ತೀವ್ರ ದಾಳಿಯನ್ನು ನಡೆಸುತ್ತಿದರೆ, ಯೂಕ್ರೇನ್ ಜನರು ರಷ್ಯಾ ವಿರುದ್ಧ ಪ್ರತಿದಾಳಿಯನ್ನು ನಡೆಸುತ್ತಿದ್ದಾರೆ.
ಇದೀಗ ಬಂದಿರುವ ಸುದ್ದಿಯ ಪ್ರಕಾರ ರಷ್ಯಾ ವ್ಯಕ್ತಿಗೆ ಸಂಬಂಧಿಸಿದ ಐಷಾರಾಮಿ ಹಡಗನ್ನು ಮುಳುಗಿಲು ಯತ್ನಿಸಿದ ಯೂಕ್ರೇನಿಯನ್ ನಾವಿಕನೊಬ್ಬನನ್ನು ಕಳೆದ ಶನಿವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಅರಸ್ ಒಸ್ಟಾಪ್ಚುಕ್ (55) ಎಂದು ಗುರುತಿಸಲಾಗಿದೆ.
156 ಅಡಿ ಎತ್ತರದ ಐಷಾರಾಮಿ ಹಡಗಿನ ಇಂಜಿನ್ ಕೊಠಡಿಯಲ್ಲಿರುವ ಕವಾಟುಗಳನ್ನು ತೆರೆದು ಹಡಗಿನ ಒಳಗೆ ಪ್ರವಾಹ ಸೃಷ್ಟಿಸಲು ನಾವಿಕ ಯತ್ನಿಸಿದ್ದಾನೆ. ಯೂಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ವಿರುದ್ಧ ಪ್ರತಿಭಟನೆಯ ಭಾಗವಾಗಿ ನಾವಿಕ ಈ ದುಷ್ಕೃತ್ಯಕ್ಕೆ ಕೈಹಾಕಿದ್ದಾನೆ.
ಹಡಗನ್ನು ಸ್ಪೇನ್ನ ಮಲ್ಲೊರ್ಕಾದಲ್ಲಿ ಮುಳುಗಿಸಲು ನಾವಿಕ ಯತ್ನಿಸಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ. ನಾವಿಕನನ್ನು ಸ್ಪೇನ್ನ ಸಿವಿಲ್ ಗಾರ್ಡ್ ಶನಿವಾರ ಬಂಧಿಸಿದ್ದು, ಭಾನುವಾರ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದಾರೆ. ನಾನು ಏನು ಮಾಡಿದೆನೋ ಆ ಬಗ್ಗೆ ನನಗೆ ಯಾವುದೇ ಪಶ್ಚಾತಾಪ ಇಲ್ಲ. ಬೇಕಿದ್ದರೆ ಇನ್ನೊಮ್ಮೆ ಮಾಡುತ್ತೇನೆ ಎಂದು ನಾವಿಕ, ಜಡ್ಜ್ ಮುಂದೆ ಹೇಳಿಕೆ ನೀಡಿದ್ದಾನೆ.
ನನ್ನ ಮಾಲೀಕ ಓರ್ವ ಕ್ರಿಮಿನಲ್. ಯೂಕ್ರೇನಿಯನ್ ಜನರನ್ನು ಕೊಲ್ಲಲು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ. ಆತನನ್ನು ಕೊಲ್ಲಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ನಾವಿಕ ಹೇಳಿಕೊಂಡಿದ್ದಾನೆ. ಕಳೆದ 10 ವರ್ಷಗಳಿಂದ ನಾವಿಕ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ.
ಅಂದಹಾಗೆ ಲೇಡಿ ಅನಸ್ತಾಸಿಯಾ ಹೆಸರಿನ ಐಷಾರಾಮಿ ಹಡಗು ಅಲೆಕ್ಸಾಂಡರ್ ಮಿಜೀವ್ ಎಂಬುವರಿಗೆ ಸಂಬಂಧಿಸಿದ್ದು, ಅಲೆಕ್ಸಾಂಡರ್ ರೊಸೊಬೊರೊನ್ಎಕ್ಷ್ಪೋರ್ಟ್ ಕಂಪನಿಯ ಸಿಇಒ. ಈ ಕಂಪನಿ ಹಡಗು, ಟ್ಯಾಂಕ್ಸ್ ಮತ್ತು ಯುದ್ಧ ವಿಮಾನಗಳಂತಹ ರಷ್ಯಾದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.
ಮಾಧ್ಯಮಗಳಲ್ಲಿ ಯುದ್ಧದ ಕವರೇಜ್ ನೋಡಿ ಈ ಕೆಲಸ ಮಾಡಿದ್ದಾಗಿ ನಾವಿಕ ಹೇಳಿದ್ದಾನೆ. ಯುದ್ಧ ಕುರಿತ ನ್ಯೂಸ್ ಅನ್ನು ನೋಡಿದೆ. ಕೀಯೆವ್ನ ಕಟ್ಟಡವೊಂದರ ಮೇಲೆ ಹೆಲಿಕಾಪ್ಟರ್ ದಾಳಿ ಮಾಡುವುದನ್ನು ನೋಡಿದೆ. ಈ ದಾಳಿಗೆ ಬಳಸಿದ್ದು, ಹಡಗು ಮಾಲೀಕನ ಕಂಪನಿ ತಯಾರು ಮಾಡಿದ ಶಸ್ತ್ರಾಸ್ತ್ರಗಳು. ಅವರು ಅಮಾಯಕ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಅದಕ್ಕೆ ಪ್ರತೀಕಾರವಾಗಿ ಹಡಗು ಮುಳುಗಿಸಲು ಯತ್ನಿಸಿದೆ ಎಂದು ಜಡ್ಜ್ ಮುಂದೆ ನಾವಿಕ ಹೇಳಿದ್ದಾನೆ.
ಅಂದಹಾಗೆ ಐಷಾರಾಮಿ ಹಡಗಿನ ಬೆಲೆ 7.7 ಮಿಲಿಯನ್ ಡಾಲರ್. ಭಾರತೀಯ ಕರೆನ್ಸಿ ಪ್ರಕಾರ 57,92,60,990 ರೂಪಾಯಿ. ಸದ್ಯ ನಾವಿಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸ್ಪೇನ್ನಿಂದ ತಮ್ಮ ದೇಶಕ್ಕೆ ನಾವಿಕ ಮರಳಿದ್ದು, ರಷ್ಯಾ ವಿರುದ್ಧ ಹೋರಾಟಕ್ಕೆ ಸೇರಿಕೊಂಡಿದ್ದಾನೆ.