ದುಬೈ: ದುಬೈನ ಕಟ್ಟಡವೊಂದರ ಬಾಲ್ಕನಿಯಲ್ಲಿ ಹೆಂಗೆಳೆಯರ ಬೆತ್ತಲೆ ಫೋಟೋಶೂಟ್ ಕುರಿತು ಅದರಲ್ಲಿ ಪಾಲ್ಗೊಂಡಿದ್ದ ಉಕ್ರೇನಿಯನ್ ಮಾಡೆಲ್ ತುಟಿ ಬಿಚ್ಚಿದ್ದು, ಬಲವಂತವಾಗಿ ಫೋಟೋಶೂಟ್ ಮಾಡಿಸಲಾಯಿತು ಎಂದು ಹೇಳಿದ್ದಾಳೆ.
ಏಪ್ರಿಲ್ 3ರಂದು ದುಬೈ ಕಟ್ಟಡದ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತ ಮಹಿಳೆಯರು ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದಕ್ಕೆ ಸಂಬಂಧಿಸಿದ್ದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಫೋಟೋಶೂಟ್ನಲ್ಲಿ ಉಕ್ರೇನಿಯನ್ ಮಾಡೆಲ್ ಐರಿನಾ ಸೊಟುಲೆಂಕೊ ಸಹ ಪಾಲ್ಗೊಂಡಿದ್ದರು.
ಐರಿನಾ ಬೆತ್ತಲೆಯಾಗಿ ಕಾಣಿಸಿಕೊಂಡು ಇತರೆ ಮಹಿಳೆಯರ ಜತೆ ಆಕೆಯು ಬಂಧನವಾಗಿದ್ದಕ್ಕೆ ಮತ್ತು ಸಂಪರ್ಕಕ್ಕೆ ಸಿಗದಿದ್ದಕ್ಕೆ ಆಕೆಯ 30 ವರ್ಷದ ಬಾಯ್ಫ್ರೆಂಡ್ ವಿಷಾದ ವ್ಯಕ್ತಪಡಿಸಿದ್ದಾನೆ. ಬಂಧನವಾಗುವ ಮುನ್ನ ತನ್ನ ಬಾಯ್ಫ್ರೆಂಡ್ಗೆ ಐರಿನಾ ಆಡಿಯೋ ಮತ್ತು ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದಾಳೆ.
ಫೋಟೋಶೂಟ್ ಬಗ್ಗೆ ಮಾತನಾಡಿರುವ ಐರಿನಾ, ಉಕ್ರೇನಿಯನ್ ಮತ್ತು ಅಮೆರಿಕನ್ನ ಆಗರ್ಭ ಶ್ರೀಮಂತನೊಬ್ಬ ಇದನ್ನು ಆಯೋಜಿಸಿದ್ದನಂತೆ. ಆತನೇ ವಿಟಲಿ ಗ್ರೆಚಿನ್ (41). ಆನ್ಲೈನ್ನಲ್ಲಿ ಫೋಟೋ ಪೊಸ್ಟ್ ಮಾಡಲು ಗ್ರೆಚಿನ್ ಅನುಮತಿ ನೀಡಿದರು. ಇದರಿಂದಾಗಿ ಎಲ್ಲರು ದುಬೈ ಪೊಲೀಸರಿಂದ ಬಂಧನ ಆಗಬೇಕಾಯಿತು. ಇದೆಲ್ಲದರ ಹಿಂದೆ ಗ್ರೆಚಿನ್ ಕೈವಾಡವೇ ಇದೆ ಎಂದು ಆರೋಪಿಸಿದರು.
ಬಾಲ್ಕನಿಗೆ ಹೋಗುವಂತೆ ಬಲವಂತ ಮಾಡಿದರು. ಹೋಗದಿದ್ದರೆ, ದುಡ್ಡು ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದರು. ನಾವಿರುವುದು ಅರಬ್ ದೇಶದಲ್ಲಿ ಎಂಬ ಎಚ್ಚರಿಕೆಯನ್ನು ಸಹ ನನ್ನ ಜತೆಯಲ್ಲಿದ್ದವರಿಗೆ ನೀಡಿದೆ. ಆದರೆ, ನಮ್ಮನ್ನು ಬಲವಂತವಾಗಿ ಬೆತ್ತಲೆಯಾಗಿ ಬಾಲ್ಕನಿಗೆ ತೆರಳು ಒತ್ತಾಯಿಸಿ ಫೋಟೋ ತೆಗೆದುಕೊಂಡರು. ಮುಂದೇನಾಯಿತು ಎಂದು ನಿಮಗೆ ಗೊತ್ತಿದೆ ಎಂದು ಐರಿನಾ ಹೇಳಿದ್ದಾರೆ.
ಇದಾದ ಬಳಿಕ ಉಂಟಾದ ಸಮಸ್ಯೆಯನ್ನು ಬಗೆಹರಿಸಿ ಮನೆಗೆ ಕಳುಹಿಸಿಕೊಡುವ ಭರವಸೆ ನೀಡಿದರು. ಪೊಲೀಸ್ ಇಲಾಖೆಯಲ್ಲೂ ಪರಿಚಯದವರು ಇದ್ದರಿಂದ ಎಲ್ಲವೂ ಸರಿಹೋಗುತ್ತೆ ಎಂದು ನಂಬಿದ್ದೆವು. ಆದರೆ, ಫೋಟೋಶೂಟ್ ಆಯೋಜಿಸಿದ್ದ ಗ್ರೇಚಿನ್ ಪೊಲೀಸರ ಬೆಂಗಾವಲಿನಲ್ಲಿ ತೆರಳಿದರು.
ಫೋಟೋಶೂಟ್ ಬಳಿಕ ಮನೆಗೆ ಮರಳು ವಿಮಾನ ನಿಲ್ದಾಣಕ್ಕೆ ಬಂದೆ. ಆದರೆ, ವಾಪಸ್ ನಗರಕ್ಕೆ ಬಂದು ಹೇಳಿಕೆ ನೀಡುವಂತೆ ಪೊಲೀಸರು ನೋಟಿಸ್ ಹೊರಡಿಸಿದರು. ಆದರೆ, ಆಗಿದ್ದೇ ಬೇರೆ. ನಮ್ಮನ್ನು ಬಂಧಿಸಿದರು ಎಂದು ವಿಡಿಯೋ ಸಂದೇಶದಲ್ಲಿ ಕಣ್ಣೀರಾಕುತ್ತಾ ಹೇಳಿಕೊಂಡಿದ್ದಾಳೆ.
ಬೆತ್ತಲೆ ಫೋಟೋಶೂಟ್ಗೆಂದು ದುಬೈ ತೆರಳುತ್ತಾಳೆಂದು ಬಾಯ್ಫ್ರೆಂಡ್ಗೆ ಗೊತ್ತಿತ್ತಂತೆ. ಆದರೆ, ಅದು ಸಾರ್ವಜನಿಕ ಸ್ಥಳದಲ್ಲಿ ಮಾಡುತ್ತಾರೆಂದು ತಿಳಿದಿರಲಿಲ್ಲ. ಅದು ಬಂಧನದವರೆಗೂ ಹೋಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಐರಿನಾ ಬಾಯ್ಫ್ರೆಂಡ್ ವಿಟಲಿ ಹೇಳಿದ್ದಾರೆ.
ಸದ್ಯ ಐರಿನಾ ಇನ್ನೇನು ಬಿಡುಗಡೆಯಾಗುವ ಸಾಧ್ಯತೆ ಇದ್ದು, ತವರಿಗೆ ಮರಳಲಿದ್ದಾರೆ. (ಏಜೆನ್ಸೀಸ್)