ಕೀಯೆವ್/ಮಾಸ್ಕೋ: ಯೂಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾದಗಿನಿಂದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಿತ್ಯವು ಹರಿದಾಡುತ್ತಿದೆ. ಇವುಗಳ ನಡುವೆ ಯೂಕ್ರೇನಿಯನ್ ರೈತನೊಬ್ಬ ರಷ್ಯಾದ ಮಿಲಿಟರಿ ಟ್ಯಾಂಕ್ ಅನ್ನು ಟ್ರ್ಯಾಕ್ಟರ್ ಮೂಲಕ ಕದ್ದೊಯ್ಯುತ್ತಿರುವುದು ಎನ್ನಲಾದ ವಿಡಿಯೋವೊಂದು ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಬ್ರಿಟಿಷ್ ಕನ್ಸರ್ವೇಟಿವ್ ಪಕ್ಷದ ರಾಜಕಾರಣಿ ಮತ್ತು ಪ್ಲೈಮೌತ್ ಮೂರ್ ಕ್ಷೇತ್ರದ ಸಂಸದ ಜಾನಿ ಮೆರ್ಸರ್ ಎಂಬುವರು ವಿಡಿಯೋವನ್ನು ಸೋಮವಾರ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿ ಯಾವುದೇ ಪರಿಣಿತರು ಇಲ್ಲ ಮತ್ತು ರಷ್ಯಾ ಆಕ್ರಮಣವು ವಿಶೇಷವಾಗಿ ಉತ್ತಮವಾಗಿ ನಡೆಯುತ್ತಿರುವಂತೆ ಕಾಣುತ್ತಿಲ್ಲ. ಯೂಕ್ರೇನಿಯನ್ ಟ್ರ್ಯಾಕ್ಟರ್ ರಷ್ಯಾದ ಮಿಲಿಟಿರಿ ಟ್ಯಾಂಕ್ ಕದ್ದೊಯ್ಯುತಿದೆ ಎಂದು ಮೆರ್ಸರ್ ಬರೆದುಕೊಂಡಿದ್ದಾರೆ.
7 ಸೆಕೆಂಡ್ನ ವಿಡಿಯೋದಲ್ಲಿ ಟ್ರ್ಯಾಕ್ಟರ್ ಒಂದು ಮಿಲಿಟರಿ ಟ್ಯಾಂಕ್ ಅನ್ನು ಎಳೆದೊಯ್ಯುತ್ತಿರುವ ಮತ್ತು ಅದರ ಹಿಂದೆ ವ್ಯಕ್ತಿಯೊಬ್ಬ ಓಡುತ್ತಿರುವ ದೃಶ್ಯವಿದೆ. ಈಗಾಗಲೇ ಈ ವಿಡಿಯೋ 4 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ರಷ್ಯಾವನ್ನು ಏಕಾಂಗಿಯಾಗಿ ಎದುರಿಸುತ್ತಿರುವ ಯೂಕ್ರೇನಿಯನ್ನರ ದಿಟ್ಟತನವನ್ನು ವಿಡಿಯೋ ನೋಡಿದ ನೆಟ್ಟಿಗರು ಕೊಂಡಾಡುತ್ತಿದ್ದಾರೆ.
2014 ರಿಂದ 2021ರವರೆಗೆ ಆಸ್ಟ್ರಿಯಾದಲ್ಲಿ ಯೂಕ್ರೇನ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಅಲೆಕ್ಸಾಂಡರ್ ಶೆರ್ಬಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಉಕ್ರೇನಿಯನ್ನರು ನಿಜವಾಗಿಯೂ ಕಠಿಣ ಬಿಸ್ಕೆಟ್ಗಳು ಎಂದು ಬರೆದುಕೊಂಡಿದ್ದಾರೆ.
ಇನ್ನೂ ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ಮುಂದುವರಿದಿದೆ. ಇಂದು ನಡೆದ ಸಂಧಾನ ಸಭೆ ವಿಫಲವಾಗಿದ್ದು, ಇದರ ಬೆನ್ನಲ್ಲೇ ರಷ್ಯಾ ಯೂಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. (ಏಜೆನ್ಸೀಸ್)