ನ್ಯೂಸ್

ನಗು ನಗುತ್ತಾ ಗಂಡನ ಕಳುಹಿಸಿದ ಬೆನ್ನಲ್ಲೇ ಪತ್ನಿ ಮಾಡಿದ ನಿರ್ಧಾರಕ್ಕೆ ಪತಿಯು ಬಲಿ!

ವಿಜಯನಗರ: ಮದುವೆಯಾದ ಆರು ತಿಂಗಳಲ್ಲೇ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಿನ್ನೆ (ಅ.30) ನಡೆದಿದೆ.

ಮೃತ ದಂಪತಿಯನ್ನು ರಾಮು ಮತ್ತು ಹೇಮಾ ಎಂದು ಗುರುತಿಸಲಾಗಿದೆ. ಇಬ್ಬರು ವಿಜಯನಗರ ಜಿಲ್ಲೆಯ ಕೊಟ್ಟವಲಸ ಮಂಡಲದ ಚೀಪುರುವಲಸಾದಲ್ಲಿ ನೆಲೆಸಿದ್ದರು. ರಾಮು ವೃತ್ತಿಯಲ್ಲಿ ಜೆಸಿಬಿ ಆಪರೇಟರ್​ ಆಗಿದ್ದ. ಕೆಲ ದಿನಗಳ ನಂತರ ಗಂಡ ಹೆಂಡತಿಯನ್ನು ಭೇಟಿಯಾಗಿ ಮತ್ತೆ ಕೆಲಸಕ್ಕೆಂದು ಹೊರ ಹೋದ ಕೆಲವೇ ಕ್ಷಣಗಳಲ್ಲಿ ಹೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇತ್ತ ಪತ್ನಿಯ ಸಾವಿನ ಸುದ್ದಿ ತಿಳಿದ ರಾಮು ಸಹ ಮರವೊಂದಕ್ಕೆ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ.

ಸಾವಿಗೂ ಮುನ್ನ ಹೇಮಾ, ಗಂಡನ ಎದುರು ತುಂಬಾ ಸಂತೋಷವಾಗಿಯೇ ಇದ್ದಳು. ನಗು ನಗುತ್ತಲೇ ಮಾತನಾಡಿದ್ದಳು. ಆದರೆ, ಕೊನೆಯ ಕ್ಷಣದಲ್ಲಿ ಏನಾಯಿತು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಇಬ್ಬರು ಕಳೆದ ಜುಲೈ 1ರಂದು ಮದುವೆ ಆಗಿದ್ದರು.

ರಾಮು ಜೆಸಿಬಿ ಆಪರೇಟರ್​ ಆಗಿದ್ದರಿಂದ ಕೆಲಸಕ್ಕೆಂದು ಊರೂರು ತಿರುಗಬೇಕಿತ್ತು. ಕೆಲವೊಮ್ಮೆ ಮನೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದಾಗ್ಯೂ ಬಿಡುವು ಮಾಡಿಕೊಂಡು ಬಂದು ಪತ್ನಿಯ ಜತೆ ಸಮಯ ಕಳೆದು ಹೋಗುತ್ತಿದ್ದ. ಶನಿವಾರವೂ ಸಹ ಪತ್ನಿ ನೋಡಲೆಂದು ರಾಮು ಬೈಕ್​ನಲ್ಲಿ ಬಂದಿದ್ದ. ಈ ವೇಳೆ ಇಬ್ಬರು ತುಂಬಾ ಸಂತೋಷದಿಂದಲೇ ಇದ್ದರು. ಮತ್ತೆ ರಾಮು ಕೆಲಸಕ್ಕೆಂದು ಹೊರಟ ಮರುಕ್ಷಣವೇ ಹೇಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪತ್ನಿ ಮೃತಪಟ್ಟ ಸುದ್ದಿ ಕೇಳಿ ರಾಮು ಕೂಡ ನೇನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಗ್ರಾಮಸ್ಥರನ್ನು ಆಘಾತಕ್ಕೆ ದೂಡಿದೆ. ಇಬ್ಬರು ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಪ್ರಶ್ನೆಯಾಗಿ ಉಳಿದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)