ಅಹಮದಾಬಾದ್: 2002ರಲ್ಲಿ ನಡೆದ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಬಂಧನವಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ಗೆ ಜಾಮೀನು ನೀಡದಂತೆ ಗುಜರಾತ್ ಪೊಲೀಸರು ಅಹಮದಾಬಾದ್ ಸೆಷೆನ್ಸ್ ಕೋರ್ಟ್ನಲ್ಲಿ ಅಫಿಡೆವಿಟ್ ಸಲ್ಲಿಸಿದ್ದಾರೆ. ಅಲ್ಲದೆ, ಆಗಿನ ಬಿಜೆಪಿ ಸರ್ಕಾರವನ್ನು ಬೀಳಿಸಲು ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಜೊತೆ ಸೇರಿ ಬಹುದೊಡ್ಡ ಪಿತೂರಿ ನಡೆಸಿದ್ದರು ಎಂದು ಗುಜರಾತ್ ಪೊಲೀಸರು ಅಫಿಡೆವಿಟ್ನಲ್ಲಿ ತಿಳಿಸಿದ್ದಾರೆ.
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಥವಾ ಬೀಳಿಸುವುದು ಅರ್ಜಿದಾರ (ಸೆಟಲ್ವಾಡ್)ಳ ಪ್ರಮುಖ ರಾಜಕೀಯ ಉದ್ದೇಶವಾಗಿತ್ತು. ಗುಜರಾತಿನ ಅಮಾಯಕರ ಮೇಲೆ ತಪ್ಪು ಭಾವನೆ ಮೂಡಿಸುವ ಪ್ರಯತ್ನ ಪ್ರತಿಫಲವಾಗಿ ಪ್ರತಿಪಕ್ಷದಿಂದ ಸೆಟಲ್ವಾಡ್ ಅವರು ಅಕ್ರಮ ಹಣ ಪಡೆದಿರುವುದರ ಜೊತೆಗೆ ಅನೇಕ ಸೌಲಭ್ಯಗಳನ್ನು ಹೊಂದಿದ್ದಾರೆ ಎಂದು ಅಹಮದಾಬಾದ್ ಸೆಷೆನ್ಸ್ ಕೋರ್ಟ್ ಮುಂದೆ ಸಲ್ಲಿಸಿರುವ ಅಫಿಡೆವಿಟ್ನಲ್ಲಿ ಗುಜರಾತಿನ ವಿಶೇಷ ತನಿಖಾ ತಂಡ (ಎಸ್‌ಐಟಿ) ಉಲ್ಲೇಖಿಸಿದೆ.
ಸಾಕ್ಷಿಯ ಹೇಳಿಕೆಗಳನ್ನು ಉಲ್ಲೇಖಿಸಿರುವ ಎಸ್‌ಐಟಿ, ಅಹ್ಮದ್ ಪಟೇಲ್ ಅವರಿಗಾಗಿ ಪಿತೂರಿಯನ್ನು ನೆಡೆಸಲಾಗಿತ್ತು. 2002 ರಲ್ಲಿ ನಡೆ ಗೋಧ್ರಾ ಗಲಭೆಯ ನಂತರ ಪಟೇಲ್ ಆದೇಶದ ಮೇರೆಗೆ ಸೆಟಲ್ವಾಡ್ 30 ಲಕ್ಷ ರೂ. ಪಡೆದುಕೊಂಡಿದ್ದರು. ಬಿಜೆಪಿ ಸರ್ಕಾರದ ಹಿರಿಯ ನಾಯಕರ ಹೆಸರನ್ನು ಗಲಭೆ ಪ್ರಕರಣಗಳಲ್ಲಿ ಸಿಲುಕಿಸಲು ದೆಹಲಿಯಲ್ಲಿ ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷ(ಕಾಂಗ್ರೆಸ್)ದ ನಾಯಕರನ್ನು ಸೆಟಲ್ವಾಡ್ ಭೇಟಿಯಾಗುತ್ತಿದ್ದರು ಎಂದು ಎಸ್‌ಐಟಿ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
ಸಾಕ್ಷಿದಾರರೊಬ್ಬ ಹೇಳಿಕೆಯನ್ನು ಉಲ್ಲೇಖಿಸಿರುವ ಎಸ್‌ಐಟಿ, ರಾಜ್ಯಸಭಾ ಸ್ಥಾನಕ್ಕೆ ಕೇವಲ ಶಬಾನಾ ಮತ್ತು ಜಾವೇದ್ರಿಗೆ ಮಾತ್ರ ಯಾಕೆ ಅವಕಾಶ ಕೊಡುತ್ತೀರಾ? ನನ್ನನ್ನು ರಾಜ್ಯಸಭಾ ಸದಸ್ಯರಾಗಿ ಮಾಡುವುದಿಲ್ಲ ಏಕೆ ಎಂದು 2006ರಲ್ಲಿ ಸೆಟಲ್ವಾಡ್ ಕೇಳಿದ್ದರು ಎಂದಿರುವ ಎಸ್‌ಐಟಿ, ಸೆಟಲ್ವಾಡ್ ವಿರುದ್ಧದ ತನಿಖೆ ಇನ್ನೂ ನಡೆಯುತ್ತಿದೆ. ಈ ಸಮಯದಲ್ಲಿ ಅವರು ಬಿಡುಗಡೆಯಾದರೆ, ಸಾಕ್ಷಿಗಳನ್ನು ಬೆದರಿಸಲು ಮತ್ತು ಹಾಳುಮಾಡಲು ಪ್ರಯತ್ನಿಸಬಹುದು. ಹೀಗಾಗಿ ಅವರಿಗೆ ಜಾಮೀನು ನೀಡಬಾರದೆಂದು ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿಡಿ ಠಕ್ಕರ್ ಅವರು ಎಸ್‌ಐಟಿಯ ಉತ್ತರವನ್ನು ದಾಖಲಿಸಿಕೊಂಡಿದೆ. ಸೆಟಲ್ವಾಡ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. 2002ರಲ್ಲಿ ನಡೆದ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನು ಎಸ್‌ಐಟಿ ಬಂಧಿಸಿದೆ.
ಇತ್ತೀಚೆಗಷ್ಟೇ ಗುಜರಾತ್ ಗಲಭೆ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ಮೋದಿ ಸೇರಿದಂತೆ 63 ಮಂದಿಯ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಘಟನೆ ಸಂಬಂಧ ವಿಶೇಷ ತನಿಖಾ ತಂಡವು ತನಿಖೆ ನಡೆಸಿ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ, ಗಲಭೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಪತ್ನಿ ಜಾಕಿಯಾ ಜಫ್ರಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿ, ಎಸ್‌ಐಟಿ ತನಿಖಾ ವರದಿಯನ್ನು ಎತ್ತಿಹಿಡಿದಿತ್ತು. (ಏಜೆನ್ಸೀಸ್)