ಕೀಯೆವ್/ಮಾಸ್ಕೋ/ಚೆನ್ನೈ: ಯೂಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ವಿರುದ್ಧ ಹೋರಾಡಲು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ವಿದ್ಯಾರ್ಥಿಯೊಬ್ಬ ಯೂಕ್ರೇನ್ಗೆ ಪ್ಯಾರಾ ಮಿಲಿಟರಿ ಪಡೆಗೆ ಸೇರಿದ್ದಾರೆ.
ವಿದ್ಯಾರ್ಥಿಯನ್ನು ಸೈನಿಕೇಶ್ ರವಿಚಂದ್ರನ್ ಎಂದು ಗುರುತಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ತಮಿಳುನಾಡಿನ ಅಧಿಕಾರಿಗಳು ಸೈನಿಕೇಶ್ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸೈನಿಕೇಶ್ಗೆ ಭಾರತೀಯ ಸೇನೆಗೆ ಸೇರಲು ಆಸೆ ಇತ್ತು. ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಆದರೆ ಅರ್ಜಿ ತಿರಸ್ಕರಿಸಲಾಯಿತು ಎಂದು ತಿಳಿದುಬಂದಿದೆ.
2018ರಲ್ಲಿ ಸೈನಿಕೇಶ್ ಯೂಕ್ರೇನ್ಗೆ ತೆರಳಿದ್ದಾರೆ. ಖಾರ್ಕೀವ್ನಲ್ಲಿರುವ ರಾಷ್ಟ್ರೀಯ ಅಂತರಿಕ್ಷಯಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 2022ರ ಜುಲೈನಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು. ಅಷ್ಟರಲ್ಲಿ ರಷ್ಯಾ ಯೂಕ್ರೇನ್ ಮೇಲೆ ಯುದ್ಧ ಸಾರಿ, ದಾಳಿ ನಡೆಸುತ್ತಿದೆ. ಯೂಕ್ರೇನ್-ರಷ್ಯಾ ನಡುವಿನ ಯುದ್ಧ ಇಂದು 13 ದಿನಗಳಿಗೆ ಕಾಲಿಟ್ಟಿದೆ.
ಯುದ್ಧದ ನಡುವೆಯೇ ಸೈನಿಕೇಶ್ ಮತ್ತು ಪಾಲಕರ ಮಧ್ಯೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ಸೈನಿಕೇಶ್ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದಾರೆ. ತಾನು ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್ ಅರೆ ಸೇನಾ ಪಡೆಯನ್ನು ಸೇರಿರುವುದಾಗಿ ಕುಟುಂಬಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್)