ನ್ಯೂಸ್

ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮನೆಗೆ ಬಾಗಿಲಿಗೆ ಹೋಗಿ ಎಳೆದು ತಂದು ಶಿಕ್ಷಿಸುತ್ತಿರುವ ತಾಲಿಬಾನಿಗಳು!

ಕಾಬುಲ್​: ತಾಲಿಬಾನ್​ ಕಪಿಮುಷ್ಠಿಯಲ್ಲಿ ಸಿಲುಕಿರುವ ಆಫ್ಘಾನ್​ ಜನರು ನಿತ್ಯವೂ ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಸ್ಥಿತಿ ನಿರ್ಮಾಣ ಆಗಿದೆ. ಕಳೆದ 4 ದಿನಗಳಲ್ಲಿ ಕಾಬುಲ್​ ಏರ್​ಪೋರ್ಟ್​ ವ್ಯಾಪ್ತಿ ಒಂದರಲ್ಲಿ ತಾಲಿಬಾನಿಗಳ ಗುಂಡೇಟಿಗೆ 12 ಮಂದಿ ಪ್ರಾಣ ಬಿಟ್ಟಿದ್ದಾರೆ. ಅಲ್ಲದೆ, ತಾಲಿಬಾನಿಗಳು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವ ದೃಶ್ಯ ಎಂಥವರ ಎದೆಯಲ್ಲಿ ನಡುಕ ಹುಟ್ಟಿಸುವಂತಿದ್ದು, ಅಕ್ಷರಶಃ ಆಫ್ಘಾನ್​, ತಾಲಿಬಾನ್​ ಅಡಿಯಲ್ಲಿ ನರಕವಾಗಿದೆ.

ತಾಜಾ ಬೆಳವಣಿಗೆ ಎಂಬಂತೆ ತಾಲಿಬಾನ್​ ಉಗ್ರರು ದ್ವೇಷದ ಹಾದಿಯನ್ನು ತುಳಿದಿದ್ದು, ಈ ಹಿಂದೆ ತಮ್ಮ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನಾಪಡೆಗಳಿಗೆ ಸಹಾಯ ಮಾಡಿದ್ದವರ ಮನೆಯನ್ನು ಹುಡುಕಿ...ಹುಡುಕಿ ಭೀಕರ ಶಿಕ್ಷೆಯನ್ನು ನೀಡುತ್ತಿದ್ದಾರೆ.

ಫಾಕ್ಸ್​ ನ್ಯೂಸ್​ಗೆ ಸಂದರ್ಶನ ನೀಡಿರುವ ನಿವೃತ್ತ ನೌಕಾ ಸಾರ್ಜೆಂಟ್​ ರಿಯಾನ್ ರೋಜರ್ಸ್, 2010ರಲ್ಲಿ ಕಾಬುಲ್​ನ ಹೆಲ್ಮಾಂಡ್​ ಪ್ರಾಂತ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಜತೆ ಕಾರ್ಯನಿರ್ವಹಿಸುತ್ತಿದ್ದ ವ್ಯಾಖ್ಯಾನಕಾರ ಪ್ರಸ್ತುತ ತಾಲಿಬಾನ್​ ಬಲೆಯಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.

ನಿನ್ನೆ ಅವರು ನನ್ನೊಂದಿಗೆ ಮಾತನಾಡಿದರು. ಆಫ್ಘಾನ್​ ರಾಷ್ಟ್ರೀ ಸೇನೆಯ ಮೂವರು ಕಮಾಂಡರ್​ಗಳನ್ನು ನಿನ್ನೆಯಷ್ಟೇ ತಾಲಿಬಾನಿಗಳು ಗಲ್ಲಿಗೇರಿಸಿದರು ಎಂಬ ಮಾಹಿತಿ ನೀಡಿದರು. ಅಮೆರಿಕ ಸೇನೆಗೆ ಸಹಕರಿಸಿದವರ ಪ್ರತಿಯೊಬ್ಬರ ಮನೆಯ ಬಾಗಿಲು ಬಡಿಯುತ್ತಿರುವ ತಾಲಿಬಾನಿಗಳು ಸಿಕ್ಕಿಕೊಂಡವರಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದಾರುವ ಮಾಹಿತಿಯನ್ನು ವ್ಯಾಖ್ಯಾನಕಾರ ತಿಳಿಸಿದ್ದಾಗಿ ರಿಯಾನ್​ ಫಾಕ್ಸ್​ ನ್ಯೂಸ್​ಗೆ ತಿಳಿಸಿದರು. (ಏಜೆನ್ಸೀಸ್​)