ಜೆರುಸಲೇಮ್: ಇಸ್ರೇಲ್ ಮೇಲೆ ನಡೆದ ಪ್ಯಾಲೇಸ್ಟಿನಿಯನ್ ರಾಕೆಟ್ ದಾಳಿ ವೇಳೆ ಕೇರಳ ಮೂಲದ ಮಹಿಳೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಮಂಗಳವಾರ ನಡೆದಿರುವುದಾಗಿ ಮೃತಳ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಸೌಮ್ಯ (31) ಮೃತ ದುರ್ದೈವಿ. ಈಕೆ ಆ್ಯಶ್ಕೆಲೊನ್ ನಗರದಲ್ಲಿ ವಾಸವಿದ್ದಳು. ಮಂಗಳವಾರ ಸಂಜೆ ತನ್ನ ಪತಿ ಸಂತೋಷ್ರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುವಾಗ ರಾಕೆಟ್ ನೇರವಾಗಿ ಸೌಮ್ಯ ಮನೆಯ ಮೇಲೇ ಬಿದ್ದಿದೆ.
ವಿಡಿಯೋ ಕಾಲ್ ವೇಳೆ ನನ್ನ ಸಹೋದರ ಭಾರಿ ಶಬ್ದವನ್ನು ಕೇಳಿದರು. ಇದ್ದಕ್ಕಿದ್ದಂತೆ ಫೋನ್ ಸಂಪರ್ಕ ಕಡಿತಗೊಂಡಿತು. ತಕ್ಷಣ ನಾವು ಅಲ್ಲಿಯೇ ಕೆಲಸದ ನಿಮಿತ್ತ ವಾಸವಿದ್ದ ಇತರೆ ಮಲಯಾಳಿಗಳನ್ನು ಸಂಪರ್ಕಿಸಿದೆವು. ಆ ಬಳಿಕ ಈ ದುರ್ಘಟನೆ ನಮಗೆ ತಿಳಿಯಿತು ಎಂದು ಸಂತೋಷ್ ಸಹೋದರ ಸಾಜಿ ಮಾಹಿತಿ ನೀಡಿದ್ದಾರೆ.
ಸೌಮ್ಯ ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದವರು. ಕಳೆದ 7 ವರ್ಷಗಳಿಂದ ಇಸ್ರೇಲ್ನಲ್ಲಿ ಮನೆ ಕೆಲಸ ಮಾಡುತ್ತಿದ್ದರು ಎಂದು ಅವಳ ಸಂಬಂಧಿಕರು ಹೇಳಿದ್ದಾರೆ.
ಇನ್ನು ಘಟನೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಆದರೆ, ಹೊಸದಾಗಿ ಶಾಸಕರಾಗಿ ಆಯ್ಕೆಯಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮಣಿ ಸಿ ಕಪ್ಪನ್ ಘಟನೆಯನ್ನು ಖಂಡಿಸಿದ್ದಾರೆ.
ಕಪ್ಪನ್ ಅವರು ಬೆರೆದುಕೊಂಡಿರುವ ಫೇಸ್ಬುಕ್ ಪೋಸ್ಟ್ ಮಾಹಿತಿ ಪ್ರಕಾರ ಸಾವಿರಾರು ಕೇರಳಿಗರು ಇಸ್ರೇಲ್ನಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಸ್ಥಿಕೆ ವಹಿಸಬೇಕೆಂದು ಕಪ್ಪನ್ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)