More

    ಗೊಂದಲ ತಪ್ಪಿಸಿ: ಲಸಿಕೆಗೆ ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ

    ಕರ್ನಾಟಕದಲ್ಲಿ ಕರೊನಾ ಎರಡನೆಯ ಅಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಜಾರಿಮಾಡಿರುವ ಲಾಕ್​ಡೌನ್ ಎರಡು ದಿನ ಪೂರೈಸಿದೆ. ಮಾರ್ಗಸೂಚಿಯಲ್ಲಿನ ಅಸ್ಪಷ್ಟತೆ ಮತ್ತು ಗೊಂದಲದಿಂದಾಗಿ ಮೊದಲನೆಯ ದಿನ ಸಾಕಷ್ಟು ರಗಳೆಗಳೂ ಉಂಟಾದವು; ಪೊಲೀಸ್ ಕ್ರಮದ ಬಗ್ಗೆಯೂ ಆಕ್ಷೇಪ ವ್ಯಕ್ತವಾಯಿತು. ಇದೇನೆ ಇದ್ದರೂ, ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಲ್ಲಿ ಅಷ್ಟರಮಟ್ಟಿಗೆ ಸಮಾಧಾನ. ಈ ನಡುವೆ, ಆಕ್ಸಿಜನ್, ಐಸಿಯು ಬೆಡ್ ಕೊರತೆ ಸರಿಪಡಿಸಲು ಸರ್ಕಾರ ಶ್ರಮಹಾಕುತ್ತಿದೆ; ವಿವಿಧ ಸಚಿವರಿಗೆ ಜವಾಬ್ದಾರಿ ಹಂಚಿಕೆಯೂ ಆಗಿದೆ. ಇಷ್ಟುಮಾತ್ರಕ್ಕೆ ಸಮಸ್ಯೆ ಬಗೆಹರಿದಿದೆ ಎಂದಲ್ಲ, ಪ್ರಯತ್ನವಂತೂ ನಡೆದಿದೆ. ಇಷ್ಟೆಲ್ಲ ಬೆಳವಣಿಗೆ ನಡೆದಿರುವಾಗ, ಸಾರ್ವಜನಿಕರಿಂದ ಕರೊನಾ ಲಸಿಕೆಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಮೊದಮೊದಲು ಲಸಿಕೆಗೆ ಹಿಂಜರಿಕೆ ತೋರುತ್ತಿದ್ದ ಜನರು, ಎರಡನೇ ಅಲೆಯ ಹೊಡೆತ ಕಂಡು, ಲಸಿಕೆ ಪಡೆಯಲು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಲಸಿಕಾ ಕೇಂದ್ರಗಳ ಮುಂದೆ ಉದ್ದದ ಸಾಲುಗಳು ಕಂಡುಬರುತ್ತಿವೆ. ಲಕ್ಷಾಂತರ ಜನರು ಈಗ ಲಸಿಕೆಯ ಎರಡನೆಯ ಡೋಸ್​ಗಾಗಿ ಕಾಯುತ್ತಿದ್ದಾರೆ. ಅದರೆ ಇತರ ಕೆಲ ರಾಜ್ಯಗಳ ಹಾಗೆ ಕರ್ನಾಟಕದಲ್ಲಿಯೂ ಅಗತ್ಯ ಪ್ರಮಾಣದ ಲಸಿಕೆ ತಕ್ಷಣಕ್ಕೆ ಲಭ್ಯವಿಲ್ಲ.

    ‘3 ಕೋಟಿ ಲಸಿಕೆ ಖರೀದಿಗೆ ರಾಜ್ಯ ಬೇಡಿಕೆ ಇರಿಸಿದೆ. ಇದರಲ್ಲಿ 1 ಕೋಟಿ ಕೋವ್ಯಾಕ್ಸಿನ್, 2 ಕೋಟಿ ಕೋವಿಶೀಲ್ಡ್ ಸೇರಿವೆ. ಎರಡು ಕೋಟಿ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಆದರೆ ಬೇಡಿಕೆ ಇಟ್ಟಾಕ್ಷಣ ಲಸಿಕೆ ಲಭಿಸದು. ದೇಶದೊಳಗೆ ಹಾಗೂ ಜಾಗತಿಕವಾಗಿ ವ್ಯಾಕ್ಸಿನ್​ಗೆ ಅಪಾರ ಬೇಡಿಕೆ ಇರುವುದರಿಂದ ಸಹಜವಾಗಿಯೇ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯುವುದು ಅನಿವಾರ್ಯ. ಇದಲ್ಲದೆ, ಲಸಿಕೆ ಉತ್ಪಾದನಾ ಸಂಸ್ಥೆಗಳು ದಿಢೀರನೆ ಉತ್ಪಾದನೆಯನ್ನು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಹೆಚ್ಚಿಸಲು ಸಾಧ್ಯವಾಗದು, ಅವರಿಗೂ ಸಮಯ ಹಿಡಿಯುತ್ತದೆ. ‘ಲಸಿಕೆಗಾಗಿ ನೂಕು-ನುಗ್ಗಲು ಆತಂಕ ಸಲ್ಲದು. ಲಭ್ಯವಾದಷ್ಟು ವಿತರಣೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಹೇಳಿದ್ದಾರೆ. ಇಷ್ಟಲ್ಲದೆ, 18-44 ವಯೋಮಾನದವರಿಗೂ ಲಸಿಕೆ ಕೊಡಲಾಗುವುದು ಎಂದು ಸರ್ಕಾರಗಳು ಪ್ರಕಟಿಸಿದ್ದರಿಂದ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ದೇಶಾದ್ಯಂತ 19 ಕೋಟಿಗೂ ಅಧಿಕ ಜನರು ಲಸಿಕೆಗಾಗಿ ನೋಂದಣಿ ಮಾಡಿಕೊಂಡಿದ್ದು, ಎಲ್ಲರಿಗೂ ಸಿಗಲು ಇನ್ನೂ ಕನಿಷ್ಠ ಮೂರು ತಿಂಗಳು ಬೇಕಾಗಬಹುದೆಂದು ಹೇಳಲಾಗುತ್ತಿದೆ. ಹೀಗಾಗಿ, ಗೊಂದಲಗಳಿಲ್ಲದೆ, ಅವ್ಯವಸ್ಥೆಗೆ ಆಸ್ಪದವಾಗದಂತೆ ಈ ವಿಷಯವನ್ನು ನಿಭಾಯಿಸುವುದು ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಆಕ್ಸಿಜನ್, ಐಸಿಯು ಸಮಸ್ಯೆ ಹಾಗೆ ಲಸಿಕೆ ವಿತರಣೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಸರ್ಕಾರ ಈ ನಿಟ್ಟಿನಲ್ಲಿ ವಿಳಂಬಕ್ಕೆ ಆಸ್ಪದವಿಲ್ಲದೆ ತ್ವರಿತವಾಗಿ ಕಾಲಕಾಲಕ್ಕೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ; ಸನ್ನಿವೇಶವನ್ನು ಅರ್ಥಮಾಡಿಕೊಂಡು ಜನರೂ ಸರ್ಕಾರಕ್ಕೆ ಸಹಕಾರ ಕೊಡಬೇಕಾಗುತ್ತದೆ. ಒಟ್ಟಿನಲ್ಲಿ, ಮುಖ್ಯ ಲಕ್ಷ್ಯ ಕರೊನಾ ನಿಯಂತ್ರಣ ಎಂಬುದು ಎಲ್ಲರ ಮನಸ್ಸಿನಲ್ಲಿಯೂ ಇರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts