ನ್ಯೂಸ್

50 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​: ನಿಶ್ಚಿತಾರ್ಥಕ್ಕೆ ಹೊರಟವರಲ್ಲಿ 7 ಮಂದಿ ಸಾವು, 45 ಮಂದಿ ಸ್ಥಿತಿ ಗಂಭೀರ

ಚಿತ್ತೂರು: ಸುಮಾರು 52 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಒಂದು​ 50 ಅಡಿ ಆಳದ ಕಂದಕಕ್ಕೆ ಬಿದ್ದು 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಭಕರಪೇಟ್​ ಘಾಟ್​ ರಸ್ತೆಯಲ್ಲಿ ನಡೆದಿದೆ. ಅವಘಡದಲ್ಲಿ 45 ಮಂದಿಗೆ ಗಂಭೀರ ಗಾಯವಾಗಿದೆ.

ತಿರುಪತಿ ನಗರ ಪೊಲೀಸರ ಪ್ರಕಾರ, ಈ ಘಟನೆ ಶನಿವಾರ ರಾತ್ರಿ 10.30ರ ಸುಮಾರಿಗೆ ಸಂಭವಿಸಿದೆ. ಬಸ್​ನಲ್ಲಿದ್ದ 52 ಮಂದಿಯು ಅನಂತಪುರ ಜಿಲ್ಲೆಯ ಧರ್ಮಾವಂರಂ ಮೂಲದವರು. ನಗರಿ ಸಮೀಪವಿದ್ದ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗುವಾಗ ಭಕರಪೇಟ್​ ಘಾಟ್​ ರಸ್ತೆಯಲ್ಲಿ ಕಂದಕಕ್ಕೆ ಉರುಳಿದೆ. ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ, 7 ಮಂದಿ ಸ್ಥಳದಲ್ಲೇ ಸಾವಿಗೀಡಾದರೆ, 45 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾರಿಹೋಕರು ಚಂದ್ರಗಿರಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಚಂದ್ರಗಿರಿ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದ ತಂಡವು ಕೂಡ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಕಮರಿಯಿಂದ ಮೇಲಕ್ಕೆತ್ತಿದ್ದಾರೆ. ಗಾಯಾಳುಗಳನ್ನು ತಿರುಪತಿಯ ಎಸ್‌ವಿಆರ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ತಿರುಪತಿ ನಗರ ಎಸ್ಪಿ ಸಿ. ವೆಂಕಟ ಅಪ್ಪಲ ನಾಯ್ಡು ಅವರು ರುಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದರು. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣನ್ ಅಧಿಕಾರಿಗಳಿಗೆ ಸೂಚಿಸಿದರು. ಘಟನೆಯ ಕುರಿತು ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಅವರು ರುಯಾ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದರು. (ಏಜೆನ್ಸೀಸ್​)