ಜೈಪುರ: ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ತನ್ನ ಸಂಬಂಧಿಕರಿಂದಲೇ ಹೆಂಡತಿಯ ಮೇಲೆ ಗ್ಯಾಂಗ್ರೇಪ್ ಮಾಡಿಸಿ, ಅದನ್ನು ಚಿತ್ರೀಕರಣ ಮಾಡಿರುವ ಪಾಪಿ ಪತಿರಾಯನೊಬ್ಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಅಮಾನವೀಯ ಘಟನೆ ರಾಜಸ್ಥಾನದ ಭರತಪುರದಲ್ಲಿ ನಡೆದಿದೆ ಎನ್ನಲಾಗಿದೆ.
ಹೆಂಡತಿಯ ಕುಟುಂಬದವರು 1.5 ಲಕ್ಷ ರೂಪಾಯಿ ವರದಕ್ಷಿಣೆ ಕೊಡಲು ವಿಫಲವಾಗಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ನೀನು ವರದಕ್ಷಿಣೆ ಕೊಡಲಿಲ್ಲ ಅಂದರೆ, ನಿನ್ನ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ ವರದಕ್ಷಿಣೆ ಹಣ ಪಡೆದುಕೊಳ್ಳುತ್ತೇನೆ ಎಂಬ ಉದ್ಧಟತನದ ಹೇಳಿಕೆಯನ್ನು ನೀಡುವ ಮೂಲಕ ನಾಗರಿಕ ಸಮಾಜ ತಲೆಗ್ಗಿಸುವಂತೆ ದುಷ್ಟ ಪತಿರಾಯ ಮಾಡಿದ್ದಾನೆ. ಸದ್ಯ ಪತಿಯ ಪತಿ ಮತ್ತು ಆತನ ಇಬ್ಬರು ಸಂಬಂಧಿಕರ ವಿರುದ್ಧ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಯ ಬಗ್ಗೆ ಭರತಪುರದ ಕಮನ್ ಪೊಲೀಸ್ ಠಾಣೆಯ ಅಧಿಕಾರಿ ದೌಲತ್ ಸಾಹು ಅವರು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯು ತನ್ನ ಪತಿ ಮತ್ತು ಆತನ ಇಬ್ಬರು ಸಂಬಂಧಿಕರ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಅಲ್ಲದೆ, ಅಶ್ಲೀಲ ವಿಡಿಯೋವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿರುವ ಮಾತು ಸಹ ಕೇಳಿಬಂದಿದೆ ಎಂದಿದ್ದಾರೆ.
ಸಂತ್ರಸ್ತೆ ಸಹ ಮಾತನಾಡಿದ್ದು, ನನ್ನ ಅತ್ತೆ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ಹಣ ಕೊಡಲು ವಿಫಲವಾಗಿದ್ದಕ್ಕೆ ಸಂಬಂಧಿಕರಿಂದ ನನ್ನ ಮೇಲೆ ಗ್ಯಾಂಗ್ರೇಪ್ ಮಾಡಿಸಿ, ಅದನ್ನು ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ. ಸಂಬಂಧಿಕರಲ್ಲಿ ಒಬ್ಬ ನನ್ನನ್ನು ಐದು ದಿನಗಳ ಹಿಂದೆ ಕಮನ್ಗೆ ಕರೆತಂದು ರೇಪ್ ಮಾಡಿದ್ದಾನೆ. ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ನನ್ನ ಮನೆ ಓಡಿ ಬಂದೆ ಎಂದು ಹೇಳಿದ್ದಾಳೆ.
ಸಂತ್ರಸ್ತೆ 2019ರಲ್ಲಿ ಹರಿಯಾಣದಲ್ಲಿ ಮದುವೆ ಆಗಿದ್ದಳು. ಅಂದಿನಿಂದಲೂ ಅತ್ತೆ ಆಖೆಗೆ ಕಿರುಕುಳ ನೀಡುತ್ತಿದ್ದಾರಂತೆ. ಈ ಕಾರಣದಿಂದಲೇ ಆಕೆ ತವರು ಮನೆಗೆ ಹಿಂದಿರುಗಿದ್ದಳು. ಆದರೆ, ಗಂಡ ಆಕೆಯನ್ನು ಪುಸಲಾಯಿಸಿ ಮತ್ತೆ ಮನೆಗೆ ಕರೆದೊಯ್ದಿದ್ದ. ಇದಾದ ಬಳಿಕ ತನ್ನ ಇಬ್ಬರು ಸಂಬಂಧಿಕರನ್ನು ಮನೆ ಕರೆದು ನನ್ನ ಮೇಲೆ ಗ್ಯಾಂಗ್ರೇಪ್ ಮಾಡಲು ಹೇಳಿದ. ಅದರಂತೆ ನನ್ನ ಮೇಲೆ ಮೃಗೀಯವಾಗಿ ಎರಗಿದರು. ಅದನ್ನು ಪತಿ ವಿಡಿಯೋ ರೆಕಾರ್ಡ್ ಮಾಡಿಕೊಂಡ ಎಂದು ಸಂತ್ರಸ್ತೆ ಹೇಳಿದ್ದಾಳೆ.
ವಿಡಿಯೋ ಚಿತ್ರೀಕರಣ ಮಾಡಿದ ಬಳಿಕ ನಿನ್ನ ಕುಟುಂಬ ವರದಕ್ಷಿಣೆ ಕೊಡಲಿಲ್ಲ ಆದರೆ, ಈಗ ನಿನ್ನ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿ ಒಂದಿಷ್ಟು ಹಣವನ್ನು ಪಡೆದುಕೊಳ್ಳುತ್ತೇನೆ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್)