ಪುಣೆ: ಮೊಮ್ಮಗಳು ಹುಟ್ಟಿದ ಖುಷಿಗೆ ರೈತನೋರ್ವ ಹೆಲಿಕಾಪ್ಟರ್ ಬಾಡಿಗೆ ಪಡೆದು ಮೊಮ್ಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಪುಣೆ ಹೊರ ವಲಯದ ಬಲೆವಾಡಿ ಏರಿಯಾದ ನಿವಾಸಿ ಅಜಿತ್ ಪಾಂಡುರಂಗ ಬಲವಾಡ್ಕರ್ ತಮ್ಮ ಮೊಮ್ಮಗಳಿಗೆ ಅದ್ಧೂರಿ ಸ್ವಾಗತವನ್ನು ನೀಡುವ ಮೂಲಕ ಹೆಣ್ಣು ಮಕ್ಕಳೆಂದರೆ ಮೂಗು ಮುರಿಯುವ ಜನರಿಗೆ ಬದಲಾವಣೆಯ ಸಂದೇಶವನ್ನು ರವಾನಿಸಿದ್ದಾರೆ. ತನ್ನ ಕುಟುಂಬದ ಹೊಸ ಅತಿಥಿ ಕೃಷಿಕಾಗೆ ಈ ರೀತಿಯ ಅದ್ಧೂರಿ ಸ್ವಾಗತ ಕೋರಲು ಮೊದಲೇ ಬಯಸಿದ್ದೆ ಎಂದು ಬಲವಾಡ್ಕರ್ ಹೇಳಿದ್ದಾರೆ.
ಹೆರಿಗೆಯಾದ ಬಳಿಕ ಸಮೀಪದ ಶೆವಾಲ್ ವಾಡಿಯಲ್ಲಿರುವ ತಾಯಿಯ ಮನೆಯಲ್ಲಿದ್ದ ಮಗು ಮತ್ತು ತಾಯಿಯನ್ನು ಮನೆಗೆ ಕರೆತರುವ ಸಮಯ ಬಂದಾಗ, ಬಲವಾಡ್ಕರ್ ಅವರು ಹೆಲಿಕಾಪ್ಟರ್ ಬುಕ್ ಮಾಡಿ ಅದ್ಧೂರಿಯಾಗಿ ಮನೆಗೆ ಕರೆತಂದಿದ್ದಾರೆ. (ಏಜೆನ್ಸೀಸ್)