ಹೈದರಾಬಾದ್: ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಅಧಿಕಾರಿ ಮತ್ತವರ ಪತ್ನಿ ದಾರುಣ ಸಾವಿಗೀಡಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರ್ಮೆಟ್ನಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.
ಅಪಘಾತದಲ್ಲಿ ಪೊಲೀಸ್ ಅಧಿಕಾರಿ ಲಕ್ಷ್ಮಣ್ (39) ಮತ್ತು ಪತ್ನಿ ಝಾನ್ಸಿ (34) ಮೃತಪಟ್ಟಿದ್ದಾರೆ. ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ್ ಹೈದರಾಬಾದ್ನ ಕೊಟ್ಟಪೇಟೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು.
ಮಗ ಸಾಹಸ ಮತ್ತು ಮಗಳು ಆಕಾಂಕ್ಷಾ ಜತೆ ಕುಟುಂಬ ಸಮೇತರಾಗಿ ಮೂರು ದಿನಗಳ ಹಿಂದೆ ಸೂರ್ಯಪೇಟೆ ಜಿಲ್ಲೆಯ ಪೆನ್ಪಹಾದ್ ವಲಯದ ನಗುಲಪತಿಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಸಂಬಂಧಿಕರ ಒತ್ತಾಯದ ಮೇರೆಗೆ ಮಗಳನ್ನು ಅಲ್ಲಿಯೇ ಬಿಟ್ಟು, ಶುಕ್ರವಾರ ರಾತ್ರಿ ಹೈದರಾಬಾದ್ಗೆ ಹಿಂದಿರುಗುತ್ತಿದ್ದರು.
ಈ ವೇಳೆ ಝಾನ್ಸಿ ಕಾರು ಓಡಿಸುತ್ತಿದ್ದರು. ಲಕ್ಷ್ಮಣ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಹಿಂದಿನ ಸೀಟಿನಲ್ಲಿ ಮಗ ಸಾಹಸ ಕುಳಿತಿದ್ದನು. ಮಧ್ಯರಾತ್ರಿ ನಿಯಂತ್ರಣ ಕಳೆದುಕೊಂಡ ಕಾರು ಅಬ್ದಲ್ಲಾಪುರ್ ಉಪನಗರದ ಇನಾನ್ಗುಡ ಗೇಟ್ ರಸ್ತೆ ಬಂದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಗಂಭೀರವಾರ ಗಾಯಗೊಂಡು ಲಕ್ಷ್ಮಣ್ ಮತ್ತು ಝಾನ್ಸಿ ಮೃತಪಟ್ಟರೆ. ಸ್ವಲ್ಪವೂ ಏಟಾಗದೇ ಮಗ ಸಾಹಸ ಪವಾಡವೆಂಬಂತೆ ಬದುಕುಳಿದಿದ್ದಾನೆ. ಆದರೂ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳು ಇದೀಗ ಅನಾಥರಾಗಿದ್ದಾರೆ. ಮೃತದೇಹಗಳನ್ನು ಹೈದರಾಬಾದ್ನ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. (ಏಜೆನ್ಸೀಸ್)