ಕೊಚ್ಚಿ: ಕೇರಳ ಮಾಡೆಲ್ಗಳಿಬ್ಬರ ದುರಂತ ಸಾವಿನ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ 'ನಂಬರ್ 18' ಹೋಟೆಲ್ ಮಾಲೀಕ ರಾಯ್ ಜೆ ವಯಲತ್ ವಿರುದ್ಧ ಇದೀಗ ಫೋರ್ಟ್ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಅಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಕೊಯಿಕ್ಕೋಡ್ ಮೂಲದ ತಾಯಿಯೊಬ್ಬಳು ಮುಂದೆ ಬಂದು ತನ್ನ ಅಪ್ರಾಪ್ತ ಮಗಳ ಮೇಲೆ ಆರೋಪಿ ರಾಯ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ರಾಯ್ ಸ್ನೇಹಿತ ಸೈಜು ಥಾಂಕಚನ್ ಮತ್ತು ಸೈಜು ಸ್ನೇಹಿತೆ ಅಂಜಲಿ ಹೆಸರು ಕೂಡ ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ ಮಾಡೆಲ್ಗಳಿದ್ದ ಕಾರು ಅಪಘಾತವಾಗುವ ಒಂದು ವಾರಕ್ಕೂ ಮುನ್ನ ನಂಬರ್ 18 ಹೋಟೆಲ್ನಲ್ಲಿ ಮಾಲೀಕ ರಾಯ್, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ. ಅಲ್ಲದೆ, ದೌರ್ಜನ್ಯವನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಸಹ ಮಾಡಿಕೊಂಡಿದ್ದಾನೆ. ದೌರ್ಜನ್ಯ ಸಂಬಂಧ ಪೊಲೀಸ್ ಠಾಣೆಯ ಮೆಟ್ಟಿಲೇರಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಆರೋಪಿ ಅಂಜಲಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಸದ್ಯ ಪೊಕ್ಸೊ ಪ್ರಕರಣವನ್ನು ಮಾಡೆಲ್ಗಳಿಬ್ಬರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ. ದೂರು ದಾಖಲಿಸಿದ ಮಹಿಳೆ ಮತ್ತು ಆಕೆಯ ಸಂತ್ರಸ್ತ ಮಗಳ ಹೇಳಿಕೆ ಪಡೆದುಕೊಂಡ ಬಳಿಕ ಆರೋಪಿ ರಾಯ್ನನ್ನು ಬಂಧಿಸುವ ಸಾಧ್ಯತೆ ಇದೆ.
ಮಾಡೆಲ್ಗಳಿಬ್ಬರ ಸಾವಿನ ಪ್ರಕರಣದಲ್ಲೂ ರಾಯ್ ಮತ್ತು ಸೈಜು ಆರೋಪಿಗಳಾಗಿದ್ದಾರೆ. ಅಲ್ಲದೆ, ಡ್ರಗ್ಸ್ ಬಳಕೆ ಮತ್ತು ಡ್ರಗ್ಸ್ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಆರೋಪಿ ಸೈಜು ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಸದ್ಯ ಮಾಡೆಲ್ಗಳಿಬ್ಬರ ಸಾವಿನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
ಮಾಡೆಲ್ಗಳಿಬ್ಬರ ಸಾವಿನ ಪ್ರಕರಣವೇನು?
2021ರ ನವೆಂಬರ್ 1ರಂದು ಫೋರ್ಟ್ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಹಿಂದಿರುಗುವಾಗ ಕೇರಳದ ವ್ಯಟ್ಟಿಲ-ಪಲರಿವಟ್ಟಮ್ ರಾಷ್ಟ್ರೀಯ ಹೆದ್ದಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಭರವಸೆಯ ಮಾಡೆಲ್ಗಳು ದುರ್ಮರಣಕ್ಕೀಡಾಗಿದರು. ಘಟನೆಯಲ್ಲಿ 2019ರ ಮಿಸ್ ಕೇರಳ ವಿಜೇತೆ ಅಟ್ಟಿಂಗಲ್ ಮೂಲದ ಅನ್ಸಿ ಕಬೀರ್ (25), ತ್ರಿಸ್ಸೂರ್ ಮೂಲದ ರನ್ನರ್ ಅಪ್ ಅಂಜನಾ ಶಾಜನ್ (24) ಮತ್ತು ಕೆ.ಎ. ಮಹಮ್ಮದ್ ಆಶಿಕ್ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್ ರೆಹಮಾನ್ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್ ನಂಬರ್ 18 ಮಾಲೀಕ ರಾಯ್ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್ರನ್ನು ಸಂಪರ್ಕಿಸಿದ್ದ. ಅಪಘಾತದ ಬೆನ್ನಲ್ಲೇ ಸೈಜು, ರಾಯ್ ಮತ್ತು ಹೋಟೆಲ್ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ.
ಇನ್ನೊಂದೆಡೆ ಪಾರ್ಟಿ ನಡೆದ ಹಾಲ್ಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಆರೋಪಿ ರಾಯ್, ಪೊಲೀಸರಿಗೆ ಸಲ್ಲಿಸಿದ್ದ. ಆದರೆ, ಡಿಜೆ ಪಾರ್ಟಿಯ ದೃಶ್ಯಗಳು ಇರಲಿಲ್ಲ. ಇದಾದ ಬಳಿಕ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿದರು. ಆದರೆ, ಸಿಸಿಟಿವಿ ಡಿವಿಆರ್ ಪತ್ತೆ ಆಗಿರಲಿಲ್ಲ. ಹೋಟೆಲ್ ಸಿಬ್ಬಂದಿಯ ಹೇಳಿಕೆ ಪ್ರಕಾರ ರಾಯ್, ಡಿವಿಆರ್ ಅನ್ನು ನಾಶಪಡಿಸಿ ಕೆರೆಯೊಂದರ ಒಳಗೆ ಎಸೆದಿರುವುದಾಗಿ ತಿಳಿಸಿದ್ದ. ಹೀಗಾಗಿ ಹಾರ್ಡ್ ಡಿಸ್ಕ್ ಪತ್ತೆ ಹಚ್ಚಲು ಸಿಬ್ಬಂದಿಯನ್ನು ಕೆರೆಯ ಸಮೀಪ ಪೊಲೀಸರು ಕರೆದೊಯ್ದಿದ್ದರು. ಆದರೆ, ಡಿವಿಆರ್ ಪತ್ತೆಯಾಗಿಲ್ಲ.
ಈ ನಿಗೂಢ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಇದೀಗ ರಾಯ್ ವಿರುದ್ಧ ಅಪ್ರಾಪ್ತ ಮೇಲಿನ ಲೈಂಗಿಕ ದೌರ್ಜನ್ಯ ಆರೋಪವೂ ಕೇಳಿಬಂದಿದ್ದು, ಮಾಡೆಲ್ಗಳಿಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಬರುವ ಸಾಧ್ಯತೆ ಇದೆ. (ಏಜೆನ್ಸೀಸ್)