ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಭಾನುವಾರ (ಡಿ. 12) ನಸುಕಿನ ಜಾವ ಕೆಲವೊತ್ತು ಹ್ಯಾಕ್ ಮಾಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಖಾತೆಯನ್ನು ಮರುಸ್ಥಾಪಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಧಾನಿ ಖಾತೆಯನ್ನು ಹ್ಯಾಕ್ ಮಾಡಿ ಬಿಟ್ಕಾಯಿನ್ ಬಗ್ಗೆ ಪ್ರಚಾರ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ. ಪ್ರಧಾನಿ ಅವರ ಟ್ವಿಟರ್ ಖಾತೆ ಅಲ್ಪಾವಧಿವರೆಗೆ ಹ್ಯಾಕ್ ಆಗಿತ್ತು. ತಕ್ಷಣ ಟ್ವಿಟರ್ ಖಾತೆಯನ್ನು ಭದ್ರಪಡಿಸಲಾಗಿದೆ. ಹ್ಯಾಕ್ ಮಾಡಿದ ಕ್ಷಣದಲ್ಲಿ ಮಾಡಲಾದ ಯಾವುದೇ ಟ್ವೀಟ್ಗಳನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ಟ್ವಿಟರ್ ಸಂಸ್ಥೆಯೊಂದಿಗೆ ಮಾತನಾಡಿ ಪ್ರಧಾನಿ ಕಾರ್ಯಾಲಯ ಸಮಸ್ಯೆ ಬಗೆಹರಿಸಿದೆ.
ಖಾತೆಯನ್ನು ಮರುಸ್ಥಾಪಿಸುವ ಮುನ್ನ ಪ್ರಧಾನಿ ಮೋದಿ ಟೈಮ್ಲೈನ್ನಲ್ಲಿ ಟ್ವೀಟ್ ಒಂದು ಶೇರ್ ಆಗಿದ್ದು, ಭಾರತವು ಲೀಗಲ್ ಟೆಂಡರ್ ಆಗಿ ಬಿಟ್ಕಾಯಿನ್ ಅನ್ನು ಸ್ವೀಕರಿಸಲಾಗಿದೆ. ಸರ್ಕಾರವು ಅಧಿಕೃತವಾಗಿ 500 ಬಿಟ್ಕಾಯಿನ್ ತೆಗೆದುಕೊಂಡಿದ್ದು, ದೇಶದ ಎಲ್ಲ ನಿವಾಸಿಗಳಿಗೆ ಅವುಗಳನ್ನು ವಿತರಿಸುತ್ತದೆ ಎಂದು ಬರೆಯಲಾಗಿದೆ.
ಅಲ್ಲದೆ, ಪ್ರಧಾನಿ ಖಾತೆಯಿಂದ ಸರಣಿ ಟ್ವೀಟ್ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರ ಕೋವಿಡ್ 19 ಪರಿಹಾರ ನಿಧಿಗೆ ದೇಣಿಗೆ ನೀಡಿ. ಇದೀಗ ಭಾರತ ಕ್ರಿಪ್ಟೋಕರೆನ್ಸಿಯನ್ನು ಅಳವಡಿಸಿಕೊಂಡಿದೆ. ದಯವಿಟ್ಟು ದೇಣಿಗೆ ನೀಡಿ ಎಂತಲೂ ಬರೆಯಲಾಗಿದೆ.
ಇದಾದ ಕೆಲವೇ ಕ್ಷಣಗಳಲ್ಲಿ ಈ ಖಾತೆ ಹ್ಯಾಕ್ ಆಗಿದೆ ಎಂಬ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಜಾನ್ ವಿಕ್ ಎಂಬ ಹೆಸರಿನಿಂದ ಖಾತೆ ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಎಲ್ಲಾ ಟ್ವೀಟ್ಗಳನ್ನು ಸದ್ಯ ಡಿಲೀಟ್ ಮಾಡಲಾಗಿದ್ದು, ಪ್ರಧಾನಿ ಮೋದಿ ಖಾತೆಯನ್ನು ಮರಳಿ ಪಡೆಯಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. (ಏಜೆನ್ಸೀಸ್)