ನ್ಯೂಸ್

ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್​ ಸಿಂಗ್​ ಹೆಸರಿಡಲು ನಿರ್ಧಾರ: ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಘೋಷಣೆ

ನವದೆಹಲಿ: ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಹೆಸರಿಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದಾಗಿ ಪ್ರಧಾನಿ ಮೋದಿ ಅವರು ತಿಳಿಸಿದರು.

ಇಂದು ರೆಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ನ 93ನೇ ಆವೃತ್ತಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಸೆಪ್ಟೆಂಬರ್ 28 ರಂದು ಭಗತ್ ಸಿಂಗ್ ಅವರ ಜನ್ಮದಿನ. ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವವಾಗಿ, ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಗಾಂಧೀಜಿ ಮತ್ತು ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನವನ್ನು ಸ್ಮರಿಸಿದರು. ಅಕ್ಟೋಬರ್ 2 ರಂದು ಗಾಂಧೀಜಿ ಅವರ ಜನ್ಮದಿನದ ಸಂದರ್ಭದಲ್ಲಿ, ನಾವು ವೋಕಲ್​ ಫಾರ್​ ಲೋಕಲ್​ (ಸ್ಥಳೀಯತೆಗಾಗಿ ಧ್ವನಿ) ಅನ್ನು ತೀವ್ರಗೊಳಿಸುವ ಪ್ರತಿಜ್ಞೆ ತೆಗೆದುಕೊಳ್ಳಬೇಕಾಗಿದೆ. ನಮ್ಮ ಸ್ಥಳೀಯ ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳನ್ನು ನಮ್ಮ ಹಬ್ಬದ ಸಂತೋಷದಲ್ಲಿ ಸೇರಿಸೇಬೇಕೆಂದು ಕರೆ ನೀಡಿದರು.

ಸೆಪ್ಟೆಂಬರ್ 25 ರಂದು ಭಾರತವು ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಶ್ರೇಷ್ಠ ಪುತ್ರನಿಗೆ ಗೌರವ ಸಲ್ಲಿಸಿದರು. ಉಪಾಧ್ಯಾಯ ಅವರ "ಸಮಗ್ರ ಮಾನವತಾವಾದ" ವನ್ನು ಶ್ಲಾಘಿಸಿದರು. (ಏಜೆನ್ಸೀಸ್​)