ನವದೆಹಲಿ: ಹಂತಹಂತವಾಗಿ 10 ಲಕ್ಷ ಹುದ್ದೆಗಳ ನೇಮಕ ಮಾಡಿಕೊಳ್ಳುವ "ರೋಜ್ಗಾರ್ ಮೇಳ" ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಅ.22) ಚಾಲನೆ ನೀಡಿದರು.
ವರ್ಚುವಲ್ ಆಗಿ ಚಾಲನೆ ನೀಡಿದ ಪ್ರಧಾನಿ ಮೋದಿ, ಇದೇ ಸಂದರ್ಭದಲ್ಲಿ ಹೊಸದಾಗಿ ನೇಮಕಗೊಂಡ 75 ಸಾವಿರ ಯುವಕರಿಗೆ ನೇಮಕಾತಿ ಆದೇಶಗಳನ್ನು ಹಸ್ತಾಂತರ ಮಾಡಿ, ಅಭಿನಂದನೆ ಸಲ್ಲಿಸಿದರು.
ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸಲು, ನಾವು ಸ್ವಾವಲಂಬಿ ಭಾರತದ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ನಮ್ಮ ಕರ್ಮಯೋಗಿಗಳ ಪ್ರಯತ್ನದಿಂದ ಸರ್ಕಾರಿ ಇಲಾಖೆಗಳ ದಕ್ಷತೆ ಹೆಚ್ಚಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಕಳೆದ 8 ವರ್ಷಗಳಲ್ಲಿ ನಾವು 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದೇವೆ. ವಿಶ್ವದ ಹಲವು ದೊಡ್ಡ ಆರ್ಥಿಕತೆಯ ರಾಷ್ಟ್ರಗಳು ಹಣದುಬ್ಬರ, ನಿರುದ್ಯೋಗದಿಂದ ಹೆಣಗಾಡುತ್ತಿವೆ ಎಂಬುದು ನಿಜ. 100 ವರ್ಷಗಳಲ್ಲಿನ ಅತಿದೊಡ್ಡ ಬಿಕ್ಕಟ್ಟಿನ ಅಡ್ಡ ಪರಿಣಾಮಗಳು 100 ದಿನಗಳಲ್ಲಿ ಹೋಗಲಾರದು ಎಂದು ಪ್ರಧಾನಿ ಹೇಳಿದರು.
ಭಾರತವು ಸಂಪೂರ್ಣ ಶಕ್ತಿ ಮತ್ತು ಹೊಸ ಉಪಕ್ರಮಗಳೊಂದಿಗೆ ಜಾಗತಿಕ ಬಿಕ್ಕಟ್ಟಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ನಾವು ಇಲ್ಲಿಯವರೆಗೆ ನಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಕಳೆದ 8 ವರ್ಷಗಳಲ್ಲಿ ನಮ್ಮ ಆರ್ಥಿಕತೆಯಲ್ಲಿನ ಅಡೆತಡೆಗಳನ್ನು ನಾವು ಕಡಿಮೆ ಮಾಡಿದ್ದೇವೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಅಭಿಯಾನದ ಮೂಲಕ ಭಾರತವು ಹೊಸ ಎತ್ತರವನ್ನು ಏರುತ್ತಿದೆ. ಈ ಉಪಕ್ರಮಗಳು ರಫ್ತು ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿವೆ ಎಂದರು
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ MSME ವಲಯಕ್ಕೆ ಕೇಂದ್ರದ ಸರ್ಕಾರ ನೀಡಿದ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣದ ಸಹಾಯವು 1.5 ಕೋಟಿ ಉದ್ಯೋಗಗಳ ಬಿಕ್ಕಟ್ಟನ್ನು ತಪ್ಪಿಸಿತು. ಉತ್ಪಾದನೆ, ಪ್ರವಾಸೋದ್ಯಮವು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಈ ಕ್ಷೇತ್ರಗಳನ್ನು ವಿಸ್ತರಿಸಲು ಸರ್ಕಾರ ಗಮನಹರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ ನಡೆಸಲು ಅನುಕೂಲವಾಗುವಂತೆ ಆಯ್ಕೆಯ ತಂತ್ರಜ್ಞಾನವನ್ನು ಸರಳಗೊಳಿಸಲಾಗಿದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಜಿಸಲಾಗುವುದು ಎಂದು ಪ್ರಧಾನಿ ಮೋದಿ ಕಳೆದ ಜೂನ್ನಲ್ಲಿ ಘೋಷಿಸಿದ್ದರು. (ಏಜೆನ್ಸೀಸ್)