ಬೆಂಗಳೂರು: ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಪಾಫುಲ್ಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಅದರ ಅಂಗಸಂಸ್ಥೆಗಳು ಸೇರಿದಂತೆ ಒಟ್ಟು 8 ಸಂಘಟನೆಗಳನ್ನು ಕೇಂದ್ರ ಸರ್ಕಾರ ಇಂದು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ, ಪಿಎಫ್ಐಯ ಸಂಘಟನೆ ಬಗೆಗಿನ ಮುಂದಿನ ಕ್ರಮಗಳೇನು? ಉಳಿದ ಕಾರ್ಯಕರ್ತರು, ಮುಖಂಡರ ಕತೆ ಏನು? ಹೊಸಬರು ಈ ಸಂಘಟನೆಗೆ ಸೇರೋಕೆ ಅವಕಾಶ ಇದೆಯಾ? ಇಲ್ವಾ? ಸೇರಿದ್ರೆ ಅಂಥವರ ವಿರುದ್ಧ ಆಗುವ ಕ್ರಮಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇನ್ನು ಮುಂದೆ ದೇಶದಲ್ಲಿ ಪಿಎಫ್ಐ ಸಂಘಟನೆ ಹೆಸರೂ ಹೇಳುವಾಗಿಲ್ಲ. ಪಿಎಫ್ಐ ಹೆಸರ ಹೇಳಿದ್ರೇನೆ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಪ್ರಕರಣ ದಾಖಲಾಗಲಿದೆ. ಹೀಗಾಗಿ ಈಗಿನಿಂದಲೇ ಯಾರೂ ಪಿಎಫ್ಐ ಹೆಸರು ಬಳಸುವಂತಿಲ್ಲ.
ಯಾವ ಹೊಸ ಕಾರ್ಯಕರ್ತರೂ ಈ ಸಂಘಟನೆಗೆ ಸೇರುವಂತಿಲ್ಲ. ಹಾಗೇನಾದ್ರು ಸಂಘಟನೆಗೆ ಸೇರುವ ಪ್ರಯತ್ನ ಮಾಡಿದ್ರೆ ಅವರ ವಿರುದ್ಧ ಯುಎಪಿಎ ಕೇಸ್ ಹಾಕಿ ತಕ್ಷನ ಬಂಧನ ಮಾಡಲಾಗುತ್ತದೆ. ಸಂಘಟನೆಯ ಉಳಿದ ಮುಖಂಡರು ಪಿಎಫ್ಐ ಹೆಸರಲ್ಲಿ ಯಾವುದೇ ಕಾರ್ಯಕ್ರಮ, ಪ್ರತಿಭಟನೆ ಹಾಗೂ ಹಣ ಸಂಗ್ರಹಣೆ ಸೇರಿದಂತೆ ಯಾವುದೇ ಚಟುವಟಿಕೆಯನ್ನೂ ಮಾಡುವಂತಿಲ್ಲ. ಪಿಎಫ್ಐ ಹೆಸರಲ್ಲಿ ಮನೆಯಲ್ಲಿ ನಾಲ್ಕು ಜನ ಸೇರಿ ಸಭೆ ಮಾಡಿದರೂ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗುತ್ತದೆ.
ಪಿಎಫ್ಐ ಬ್ಯಾನ್ ಮಾಡಿದ್ದೇಕೆ? ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣ ನೀಡಿ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಬುಧವಾರ (ಸೆ. 28) ಆದೇಶ ಹೊರಡಿಸಿದೆ. ಯುಪಿಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಪಿಎಫ್ಐ ಬ್ಯಾನ್ ಮಾಡುವಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಕಳೆದ ಸೆ.22ರಂದು ಪಿಎಫ್ಐ ಮೇಲೆ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯ ಬಳಿಕ ಬಂದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. (ದಿಗ್ವಿಜಯ ನ್ಯೂಸ್)