ಪಟನಾ: ಶಾಲಾ ವಿದ್ಯಾರ್ಥಿನಿಯ ಕುತ್ತಿಗೆಗೆ ಯುವಕನೊಬ್ಬ ಗುಂಡಿಕ್ಕಿರುವ ಆಘಾತಕಾರಿ ಘಟನೆ ಬಿಹಾರ ರಾಜಧಾನಿ ಪಟನಾದಲ್ಲಿ ಬುಧವಾರ ನಡೆದಿದೆ. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ದಾಖಲಾಗಿದ್ದು, ಅದಕ್ಕೆ ಸಂಬಂಧಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಬ್ಯೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಿಪರಾದ ಇಂದ್ರಪುರಿ ಏರಿಯಾದಲ್ಲಿ ಘಟನೆ ನಡೆದಿದೆ.
ವಿಡಿಯೋದಲ್ಲಿ ಏನಿದೆ?
ಬ್ಯಾಗ್ ಒಂದನ್ನು ಹಿಡಿದುಕೊಂಡು ಬರುವ ಯುವಕ, ತನ್ನ ಹಿಂದೆ ಹುಡುಗಿ ಬರುವುದನ್ನು ನೋಡಿ ಅಲ್ಲಿಯೇ ನಿಲ್ಲುತ್ತಾನೆ. ಹುಡುಗಿ ಜನರಿಲ್ಲದ ಕಿರಿದಾದ ರಸ್ತೆ ಕಡೆ ಬಂದು ಯುವಕನನ್ನು ದಾಟಿ ಮುಂದೆ ಹೋಗುವಾಗ ಹಿಂದೆ ಬ್ಯಾಗ್ನಿಂದ ರಿವಾಲ್ವರ್ ತೆಗೆದುಕೊಳ್ಳುವ ಆತ ಹುಡುಗಿಯ ಕುತ್ತಿಗೆಗೆ ಗುಂಡಿಕ್ಕುತ್ತಾನೆ. ಹುಡುಗಿ ದಿಢೀರನೇ ನೆಲಕ್ಕೆ ಕುಸಿಯುತ್ತಿದ್ದಂತೆ ಆತ ಅಲ್ಲಿಂದ ಪರಾರಿ ಆಗುತ್ತಾನೆ.
ಸಂತ್ರಸ್ತೆ ಪ್ರೀತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತ ಹುಡುಗಿ ತರಕಾರಿ ವ್ಯಾಪಾರಿಯ ಮಗಳು ಹಾಗೂ 9ನೇ ತರಗತಿ ವಿದ್ಯಾರ್ಥಿನಿ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್)