ನ್ಯೂಸ್

ಏರ್​ಪೋರ್ಟ್​ನಲ್ಲಿ ಸಲ್ಮಾನ್​ ಖಾನ್​ಗೆ ಕ್ಯೂ ನಲ್ಲಿ ನಿಲ್ಲುವಂತೆ ಹೇಳಿದ ಯುವ ಅಧಿಕಾರಿಗೆ ಮೆಚ್ಚುಗೆಯ ಮಹಾಪೂರ!

ಮುಂಬೈ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್​ಎಫ್​)ಯ ಯುವ ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ಖ್ಯಾತ ನಟ ಸಲ್ಮಾನ್​ ಖಾನ್​ರನ್ನು ತಡೆದು ಭದ್ರತಾ ತಪಾಸಣೆ ನಡೆಸುವ ಮೂಲಕ ರಾತ್ರೋರಾತ್ರಿ​ ರಿಯಲ್​ ಹೀರೋ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಭಾರೀ ಮೆಚ್ಚುಗೆಗು ಪಾತ್ರರಾಗಿದ್ದಾರೆ.

ಯುವ ಅಧಿಕಾರಿ ಸೋಮನಾಥ್​ ಮೊಹಂತಿ ಒಡಿಶಾದ ನಯಾಗಢ ಜಿಲ್ಲೆಯ ಪನಿಕೊಯ್ಲಿ ಮೂಲದವರು. ಟೈಗರ್​ 3 ಚಿತ್ರದ ಚಿತ್ರೀಕರಣಕ್ಕಾಗಿ ಸಲ್ಮಾನ್​ ಖಾನ್​ ಅವರು ವಿದೇಶಕ್ಕೆ ತೆರಳೆಂದು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮೊಹಂತಿ ಏರ್​ಪೋರ್ಟ್​ನಲ್ಲಿ ಕರ್ತವ್ಯದಲ್ಲಿದ್ದರು. ಬಹುತೇಕರು ವಿಐಪಿಗಳು ಬಂದಾಗ ಭದ್ರತಾ ತಪಾಸಣೆ ನಡೆಸಲು ಹಿಂಜರಿಯುತ್ತಾರೆ. ಆದರೆ, ಯಾವುದಕ್ಕೂ ಕ್ಯಾರೆ ಎನ್ನದೇ ಮೊಹಂತಿ ಅವರು ಸಲ್ಮಾನ್​ ಭದ್ರತಾ ತಪಾಸಣೆ ನಡೆಸಿ ಕಳುಹಿಸಿದ್ದಾರೆ.

ಭದ್ರತಾ ತಪಾಸಣೆ ಮಾಡಿದ್ದಲ್ಲದೆ, ಸಲ್ಮಾನ್​ ಖಾನ್​ರನ್ನು ತಡೆದು ಸಾಮಾನ್ಯ ಜನರ ರೀತಿ ಸಾಲಿನಲ್ಲಿ ನಿಲ್ಲುವಂತೆಯು ಮತ್ತು ದಾಖಲಾತಿಗಳನ್ನು ತೋರಿಸುವಂತೆ ಹೇಳಿದರು. ಇದು ಕೂಡ ಮೊಹಂತಿ ಅವರ ಕರ್ತವ್ಯ ಪ್ರಜ್ಞೆಯನ್ನು ತೋರಿಸುತ್ತದೆ. ಮೊಹಂತಿ ನಡೆಯಿಂದ ಸಲ್ಮಾನ್​ ಖಾನ್​ ಕೊಂಚ ಅಚ್ಚರಿಗೊಂಡರು ಕೂಡ ಅವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತನ್ನ ಜತೆಗಿದ್ದವರಿಗೂ ಅವರು ಹೇಳಿದಂತೆ ಕೇಳಿ ಎನ್ನುವ ಮೂಲಕ ಸಲ್ಮಾನ್​ ಕೂಡ ತಮ್ಮ ಸರಳೆಯನ್ನು ಮೆರೆದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಮೊಹಂತಿ ಅವರಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ. ಮೊಹಂತಿ ಅವರು ನಿಜವಾದ ಹೀರೋ ಎಂದು ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)