ನ್ಯೂಸ್

ಡೆಲಿವರಿ ಗರ್ಲ್​ ಆಗಿ ಜೊಮ್ಯಾಟೋಗೆ ಸೇರಿದ ಪಿಯು ವಿದ್ಯಾರ್ಥಿನಿಯ ಮನಕಲಕುವ ಕತೆ ಇದು!

ಭುವನೇಶ್ವರ: ಮಹಾಮಾರಿ ಕರೊನಾ ವೈರಸ್​ ದೇಶದಲ್ಲಿ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಅನೇಕರ ಜೀವನದ ಹಾದಿಯೇ ಬದಲಾಗಿದೆ. ಹಲವರ ಕನಸುಗಳು ಕನಸಾಗಿಯೇ ಉಳಿದಿವೆ. ಅದಕ್ಕೆ ತಾಜಾ ಉದಾಹರಣೆ ಒಡಿಶಾದ ಯುವತಿ. ವೈದ್ಯೆಳಾಗುವ ಈಕೆಯ ಕನಸು ಕರೊನಾ ಲಾಕ್​ಡೌನ್​ನಿಂದ ಕನಸಾಗಿಯೇ ಉಳಿದಿದೆ.

ಭಾನುಪ್ರಿಯಾಳ ವಯಸ್ಸು 18. ಪಿಯು ವಿದ್ಯಾರ್ಥಿನಿ ಆಗಿರುವ ಭಾನುಪ್ರಿಯಾ, ಡಾಕ್ಟರ್​ ಆಗಬೇಕೆಂಬ ಕನಸಿನೊಂದಿಗೆ ಗುರಿಯೆಡೆಗೆ ಸಾಗಿದ್ದಳು. ಆದರೆ, ಕರೊನಾ ಲಾಕ್​ಡೌನ್​ ಆಕೆಯ ಕನಸಿಕೆ ಅಡ್ಡಿಯಾಗಿದೆ. ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹಾಗೂ ಕುಟುಂಬದ ಆಧಾರವಾಗಿದ್ದ ತಂದೆಯ ಕೆಲಸವನ್ನು ಲಾಕ್​ಡೌನ್​ ಕಸಿದುಕೊಂಡಿತು. ಉಳಿತಾಯ ಹಣ ಖಾಲಿಯಾಗುತ್ತಿದ್ದಂತೆ ಮುಂದಿನ ಜೀವನವೇ ಕುಟುಂಬಕ್ಕೆ ಕಷ್ಟವಾಗಿತ್ತು. ಒಂದು ಹೊತ್ತಿನ ಆಹಾರ ವ್ಯವಸ್ಥೆ ಮಾಡುವುದೇ ಕುಟುಂಬದಕ್ಕೆ ದುಸ್ಥರವಾಗಿತ್ತು.

ಇತ್ತ ತಂದೆಯ ಅಸಹಾಯಕತೆಯನ್ನು ನೋಡಿದ ಭಾನುಪ್ರಿಯಾ ತನ್ನ ವಿದ್ಯಾಭ್ಯಾಸವನ್ನು ಸ್ವಲ್ಪಕಾಲ ಪಕ್ಕಕ್ಕಿಟ್ಟು ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದಳು. ಮೂವರು ಒಡಹುಟ್ಟಿದವರಲ್ಲಿ ಭಾನುಪ್ರಿಯಾಳೇ ಹಿರಿಯವಳು. ಕುಟುಂಬದ ಕಷ್ಟಕ್ಕೆ ಕರಗಿದ ಭಾನುಪ್ರಿಯಾ ಆನ್​ಲೈನ್​ ಪುಡ್​​ ಡೆಲಿವರಿ ಕಂಪನಿ ಜೊಮ್ಯಾಟೋಗೆ ಡೆಲಿವರಿ ಗರ್ಲ್​ ಆಗಿ ಸೇರಿದರು.

ರಾತ್ರಿಯ ವೇಳೆ ನಿರ್ಜನ ರಸ್ತೆಗಳಲ್ಲಿ ಡೆಲಿವರಿ ಗರ್ಲ್​ ಆಗಿ ಕೆಲಸ ಮಾಡುವುದು ಎಷ್ಟೊಂದು ಕಷ್ಟ ಅಂತಾ ಗೊತ್ತಿದ್ದರೂ ಕೂಡ ಅದನ್ನೆಲ್ಲ ಲೆಕ್ಕಿಸದೇ ಭಾನುಪ್ರಿಯಾ ಕೆಲಸ ಆರಂಭಿಸಿದ್ದಾರೆ. ಕುಟುಂಬಕ್ಕೆ ಸಹಾಯವಾಗಲು ಭಾನುಪ್ರಿಯಾ ಕಾಲೇಜನ್ನು ಸಹ ತೊರೆದಿದ್ದಾರೆ. ಕೆಲಸಕ್ಕೂ ಸೇರುವ ಮುನ್ನ ತನ್ನ ತಂದೆಯ ಬೈಕ್​ ಅನ್ನು ಓಡಿಸುವುದು ಹೇಗೆಂದು ಕಲಿತುಕೊಂಡಿದ್ದಾರೆ.

ಸ್ಥಳೀಯ ಜೊಮ್ಯಾಟೋ ಕಚೇರಿಗೆ ಹೋಗಿ ಇಂಟರ್ವ್ಯೂವ್​ ಎದುರಿಸಿ ಡೆಲಿವರಿ ಏಜೆಂಟ್​ ಆಗಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಟಕ್​ನ ಮೊದಲ ಡೆಲಿವರಿ ಗರ್ಲ್​ ಹೆಸರಿಗೆ ಪಾತ್ರರಾಗಿದ್ದಾರೆ. ರಾತ್ರಿಯ ವೇಳೆ ಕಗ್ಗಲಿತ್ತನಲ್ಲಿ ಇಕ್ಕಟಾದ ರಸ್ತೆಗಳಲ್ಲಿ ಫುಡ್​ ಡೆಲಿವರಿ ಮಾಡಬೇಕಾದ ಸ್ಥಿತಿ ಇದೆ. ಆದರೆ, ಭಾನುಪ್ರಿಯಾ ಹೇಳುವಂತೆ ಇದುವರೆಗೂ ಆಕೆ ಯಾವುದೇ ಅಹಿತಕರ ಘಟನೆಯಾಗಲಿ ಅಥವಾ ಯಾರಿಂದಲೂ ಅಸಭ್ಯ ವರ್ತನೆಯನ್ನು ಎದುರಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ಡೆಲಿವರಿ ಜಾಬ್​ ಮಾತ್ರವಲ್ಲದೆ, ಬೆಳಗ್ಗೆ 6 ಗಂಟೆಗೆ ಟ್ಯೂಷನ್​ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ದುಡುಮೆ ಮಾಡುತ್ತಿರುವ ಭಾನುಪ್ರಿಯಾ, ತನ್ನ ಶಿಕ್ಷಣವನ್ನು ಮುಂದುವರಿಸುವ ಇಂಗಿತವನ್ನು ಹೊಂದಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದರ ಬಳಿ ಮಾತನಾಡಿರುವ ಭಾನುಪ್ರಿಯಾ, ಡಾಕ್ಟರ್​ ಆಗಿ ಮಾನವೀಯ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನನ್ನ ತಂದೆ ಕೆಲಸ ಹೋದಾಗಿನಿಂದ ಜೀವನ ತುಂಬಾ ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. ನನ್ನ ತಂದೆ ನಾನು ಸೇರಿ ಮೂವರು ಹೆಣ್ಣು ಮಕ್ಕಳಿದ್ದಾರೆ. ತಂದೆಗೆ ಸಹಾಯ ಮಾಡಲು ಈ ನಿರ್ಧಾರ ತೆಗೆದುಕೊಂಡೆ. ಯಾವುದೇ ಕೆಲಸವೂ ಸಣ್ಣದಲ್ಲ. ನನ್ನ ಕುಟುಂಬಕ್ಕೆ ಸಾಧ್ಯವಾದಷ್ಟು ನೆರವಾಗುತ್ತೇನೆ. ನನ್ನ ಸಹೋದರಿಯರು ಶಿಕ್ಷಣ ಮುಂದುವರಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)