ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಗುಜರಾತಿ ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ಅದರಲ್ಲೂ ಮುಂಬೈ ಮತ್ತು ಥಾಣೆಯಿಂದ ತೆಗೆದು ಹಾಕಿದರೆ, ಮಹಾರಾಷ್ಟ್ರದಲ್ಲಿ ಯಾವುದೇ ಹಣ ಉಳಿಯುವುದಿಲ್ಲ ಎಂದು ನಿನ್ನೆ (ಜುಲೈ 29) ಭಾಷಣದ ವೇಳೆ ಕೋಶಿಯಾರಿ ಹೇಳಿದ್ದಾರೆ.
ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯಲು ಸಾಧ್ಯವಿಲ್ಲ ಎಂದು ನಿನ್ನೆ ಮುಂಬೈನ ಪಶ್ಚಿಮ ಉಪನಗರ ಅಂಧೇರಿಯ ಚೌಕ್ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಹೇಳಿದರು.
ರಾಜಸ್ಥಾನದ ಮಾರ್ವಾಡಿ ಸಮುದಾಯವು ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ನೇಪಾಳ ಮತ್ತು ಮಾರಿಷಸ್‌ನಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಸಮುದಾಯದವರು ಎಲ್ಲಿಗೆ ಹೋದರೂ ವ್ಯಾಪಾರ ಮಾಡುವುದಲ್ಲದೆ ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಪರೋಪಕಾರಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದರು.
ಕೋಶಿಯಾರಿ ಹೇಳಿಕೆಯನ್ನು ಶಿವಸೇನೆ ಮತ್ತು ಕಾಂಗ್ರೆಸ್‌ನ ಹಲವಾರು ನಾಯಕರು ಟೀಕಿಸಿದ್ದಾರೆ ಮತ್ತು ಅವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಶಿವಸೇನಾ ಸಂಸದ ಸಂಜಯ್ ರಾವತ್ ಸಹ ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿದ್ದು, ಶ್ರಮದಾಯಿ ಮರಾಠಿ ಜನರನ್ನು ರಾಜ್ಯಪಾಲರು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೂಡಲೇ, ಮರಾಠಿಗನಿಗೆ ಅವಮಾನವಾಗುತ್ತಿದೆ ಎಂದು ರಾವುತ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಾರಾಷ್ಟ್ರ ರಾಜಭವನ, ಮುಂಬೈಯನ್ನು ದೇಶದ ಆರ್ಥಿಕ ರಾಜಧಾನಿಯನ್ನಾಗಿ ಮಾಡುವಲ್ಲಿ ರಾಜಸ್ಥಾನದ ಮಾರ್ವಾಡಿ ಮತ್ತು ಗುಜರಾತಿ ಸಮುದಾಯಗಳ ಕೊಡುಗೆಯನ್ನು ಕೊಶ್ಯಾರಿ ಶ್ಲಾಘಿಸಿದ್ದಾರೆ ಎಂದಿದೆ. (ಏಜೆನ್ಸೀಸ್)