ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ  
ನ್ಯೂಸ್

ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ: ಕೇಂದ್ರ ಸಚಿವ ನಾರಾಯಣ ರಾಣೆ ಬಂಧನಕ್ಕೆ ಮುಂದಾದ ಪೊಲೀಸರು

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಬಂಧಿಸಲು ನಾಶಿಕ್​ ಪೊಲೀಸರ ತಂಡ ಮುಂದಾಗಿದೆ. ಸಿಎಂ ಠಾಕ್ರೆ ಅವರ ಕಪಾಳಕ್ಕೆ ಬಾರಿಸುವುದಾಗಿ ಕೇಂದ್ರ ಸಚಿವರು ಹೇಳಿದ್ದರು.

ನಾರಾಯಣ ರಾಣೆ ಅವರು ಪ್ರಸ್ತುತ ಜನಾಶೀರ್ವಾದ ಕೊಂಕಣ ವಲಯದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಅವರ ವಿರುದ್ಧ ಅನೇಕ ಎಫ್​ಐಆರ್​ ದಾಖಲಾದ ಹಿನ್ನೆಲೆಯನ್ನು ಅವರನ್ನು ಬಂಧಿಸಲು ನಾಶಿಕ್​ ಪೊಲೀಸರು ಅವರಿರುವ ಕಡೆ ತೆರಳುತ್ತಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿರುವ ನಾರಾಯಣ ರಾಣೆ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ವ್ಯಕ್ತವಾಗುತ್ತಿದೆ. ದಕ್ಷಿಣ ಮುಂಬೈನ ಒಪೆರಾ ಹೌಸ್​ ಕ್ರಾಸಿಂಗ್​ನಲ್ಲಿ ಶಿವಸೇನಾ ಕಾರ್ಯಕರ್ತರು ರಾಣೆ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ​

ಇನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರ ಭಾಷಣದ ಸಮಯದಲ್ಲಿ ಅವರು ಸ್ವಾತಂತ್ರ್ಯದ ವರ್ಷಗಳ ಲೆಕ್ಕವನ್ನು ಕೇಳಬೇಕಿತ್ತು ಮತ್ತು ನಾನು ಅಲ್ಲಿದ್ದರೆ, ನಾನು ಅವರಿಗೆ ಒಂದು ಬಿಡ್ತಿದ್ದೆ ಎಂದು ನಾರಾಯಣ ರಾಣೆ ಹೇಳಿದ್ದರು.

ಅವರ ಹೇಳಿಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಶಿವಸೇನಾ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹಲವೆಡೆ ಸಂಘರ್ಷವು ಉಂಟಾಗಿದೆ. ಶಿವಸೇನಾ ಸಂಸದ ಎಂಪಿ ವಿನಾಯಕ್​ ರಾವತ್​ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಸಂಪುಟದಿಂದ ನಾರಾಯಣ ರಾಣೆ ಅವರನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)