ನವದೆಹಲಿ: ಗಡಿಯಲ್ಲಿ ಪಾಕಿಸ್ತಾನವು ತನ್ನ ಉಲ್ಲಂಘನೆಗಳನ್ನು ಹಾಗೂ ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ತನ್ನ ಪ್ರಾಯೋಕತ್ವವನ್ನು ನಿಲ್ಲಿಸದೇ ಹೋದಲ್ಲಿ ಹೆಚ್ಚಿನ ಸರ್ಜಿಕಲ್ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವ ಅಮಿತ್ ಷಾ ಪಾಕ್ಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ದಾಳಿಗಳನ್ನು ನಾವು ಸಹಿಸುವುದಿಲ್ಲ ಎಂಬುದನ್ನು ಸರ್ಜಿಕಲ್ ದಾಳಿಗಳು ಸಾಬೀತು ಮಾಡಿವೆ. ಹೀಗೆ ಉಲ್ಲಂಘನೆಗಳನ್ನು ಮುಂದುವರಿಸಿದರೆ, ಅಂತಹ ಮತ್ತಷ್ಟು ಸರ್ಜಿಕಲ್ ದಾಳಿಗಳು ಬರಲಿವೆ ಎಂದು ಗೋವಾದ ಧರ್ಬಂದೋರಾದಲ್ಲಿ ನಡೆದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಹೇಳಿದರು.
ಮಾಜಿ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸರ್ಜಿಕಲ್ ದಾಳಿಗಳು ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದ ಗಡಿಗಳಲ್ಲಿ ಯಾರೋಬ್ಬರು ತೊಂದರೆ ನೀಡಬಾರದೆಂಬ ಸಂದೇಶವನ್ನು ನಾವು ರವಾನಿಸಿದ್ದೇವೆ. ಅಂದು ಮಾತುನಾಡುವ ಸಮಯವಾಗಿತ್ತು. ಆದರೆ, ಇಂದು ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಮಯ ಎಂದು ಪಾಕ್ಗೆ ಚಾಟಿ ಬೀಸಿದ್ದಾರೆ.
2016ರ ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು. ಉರಿ, ಪಠಾಣ್ಕೋಟ್ ಮತ್ತು ಗುರ್ದಾಸ್ಪುರ್ನಲ್ಲಿ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ಸರ್ಜಿಕಲ್ ದಾಳಿ ನಡೆದಿತ್ತು. ಈ ಸಮಯದಲ್ಲಿ ಅನೇಕ ಉಗ್ರರ ಕ್ಯಾಂಪ್ಗಳನ್ನು ಹೊಡೆದುರುಳಿಸಲಾಗಿತ್ತು. ಉರಿ ಪ್ರದೇಶದ ಮೇಲೆ ನಡೆದ ದಾಳಿಯ 11 ದಿನಗಳ ಬಳಿಕ ಸೆಪ್ಟೆಂಬರ್ 29, 2016ರಲ್ಲಿ ಸರ್ಜಿಕಲ್ ದಾಳಿ ನಡೆದಿತ್ತು. (ಏಜೆನ್ಸೀಸ್)