ನ್ಯೂಸ್

ಐದು ವರ್ಷದ ಬಾಲಕಿಯನ್ನು ಎಲಿವೇಟರ್​ ಒಳಗೆ ಎಳೆದೊಯ್ದ ಕಾಮುಕ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ಹೈದರಾಬಾದ್​: ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಹೆಣ್ಣು ಮಗುವನ್ನು ಅಪರಿಚಿತನೊಬ್ಬ ಬಲವಂತಾಗಿ ಎಲಿವೇಟರ್​ ಒಳಗೆ ಎಳೆದುಕೊಂಡು ಅನುಚಿತವಾಗಿ ವರ್ತಿಸಿರುವ ಘಟನೆ ಮಿಯಾಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಸ್ಥಾನದ ಗೋರಖ್​ಪುರ್​ ಮೂಲದ ಗೊರಕ್​ ಪ್ರಸಾದ್​ ಮತ್ತು ರೇಣುಕಾ ಕಳೆದು 10 ವರ್ಷಗಳಿಂದ ಮಿಯಾಪುರ್​ನ ಹಫೀಜ್​ಪೇಟೆಯ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಿದ್ದಾರೆ. ದಂಪತಿಗೆ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ.

ಸೋಮವಾರ ಮಧ್ಯಾಹ್ನ ಐದು ವರ್ಷದ ಮಗಳು ತಮ್ಮ ಫ್ಲ್ಯಾಟ್​ ಮುಂದೆ ಆಟವಾಡುತ್ತಿತ್ತು. ಸ್ಟೋರ್​ ಒಂದರಲ್ಲಿ ಚಾಕೋಲೆಟ್ ಖರೀದಿಸಿ ಬಂದ ಅಪರಿಚಿತ ವ್ಯಕ್ತಿ ಅಪಾರ್ಟ್​ಮೆಂಟ್​ ಒಳಗೆ ತೆರಳಿ ಬಾಲಕಿಗೆ ಚಾಕೋಲೆಟ್​ ಆಮಿಷವೊಡ್ಡಿ ಬಲವಂತವಾಗಿ ಎಲಿವೇಟರ್​ ಒಳಗೆ ಎಳೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ.

ತಕ್ಷಣ ಬಾಲಕಿ ಕಿರುಚಿಕೊಂಡಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಬಾಲಕಿ ಏನು ನಡೆಯಿತು ಎಂದು ಪಾಲಕರ ಮುಂದೆ ಹೇಳಿದೆ. ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆರೋಪಿಯ ದುಷ್ಕೃತ್ಯವು ಅದರಲ್ಲಿ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಿಯಾಪುರ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)