ನ್ಯೂಸ್

ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆ: ಅಂದು ಮನೆಯ ಮೇಲೆ ನಡೆದ ಭಯಾನಕ ಘಟನೆ ಬಿಚ್ಚಿಟ್ಟ ಮಾಲೀಕ

ನವದೆಹಲಿ: ವಾಲಿ ಸಲೇಕ್​ ಮತ್ತು ಆತನ ಪತ್ನಿ ಅಫ್ಘಾನಿಸ್ತಾನ ರಾಜಧಾನಿ ಕಾಬುಲ್​ನ ತಮ್ಮ ನಿವಾಸದಲ್ಲಿ ಇರುವಾಗ ಸೋಮವಾರ ಅವರ ಮನೆಯ ಛಾವಣಿ ಮೇಲೆ ಭಾರೀ ಶಬ್ದ ಕೇಳುತ್ತದೆ. ಏನೆಂದು ಹೋಗಿ ಮೇಲೆ ನೋಡಿದಾಗ ವಾಲಿ ಪತ್ನಿ ಆ ದೃಶ್ಯವನ್ನು ನೋಡಿ ಅಲ್ಲಿಯೇ ಮೂರ್ಛೆ ಹೋಗುತ್ತಾರೆ.

ಈ ಮೇಲಿನ ಘಟನೆ ನಡೆದಿದ್ದು, ತಾಲಿಬಾನಿಗಳು ಕಾಬುಲ್​ ವಶಕ್ಕೆ ಪಡೆಯುತ್ತಿದ್ದಂತೆ ಅವರ ಅಟ್ಟಹಾಸದಿಂದ ತಪ್ಪಿಸಿಕೊಳ್ಳಲು ದೇಶದಿಂದಲೇ ಪರಾರಿ ಆಗಲು ಆಫ್ಘಾನ್​ ಜನರು ಯತ್ನಿಸಿದರು. ಕಾಬುಲ್​ ಏರ್​ಪೋರ್ಟ್​ ಬಳಿ ಜಮಾಸಿದ ಜನರು ಬಸ್​ಗಳಲ್ಲಿ ಜನ ತುಂಬುವಂತೆ ವಿಮಾನವನ್ನು ಏರಿ ಹೋಗುವಾಗ ಇಬ್ಬರು ಆಫ್ಘಾನ್ನರು ಮೇಲಿಂದ ಕೆಳಗೆ ಬಿದ್ದು ಸಾವಿಗೀಡಾದರು. ಅವರು ಬಿದ್ದಿದ್ದು ವಾಲಿ ಸಲೇಕ್​ ಅವರ ಮನೆಯ ಮೇಲೆ.

ಈ ಬಗ್ಗೆ ಮಾತನಾಡಿರುವ ವಾಲಿ ಸಲೇಕ್​, ಅದೊಂದು ರೀತಿಯ ಟ್ರಕ್​ ಟೈಯರ್​ ಸ್ಫೋಟಗೊಂಡ ಮಾದರಿಯಲ್ಲಿತ್ತು. ತಕ್ಷಣ ವಾಲಿ ಮಹಡಿಯ ಮೇಲೆ ನೋಡಿದ್ದಾರೆ. ಈ ವೇಳೆ ರಕ್ತಸಿಕ್ತ ಸ್ಥಿತಿಯಲ್ಲಿ ಇಬ್ಬರ ಮೃತದೇಹವನ್ನು ನೋಡಿ ಶಾಕ್​ ಆಗಿದ್ದಾರೆ. 49 ವರ್ಷದ ವಾಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಆ ದೃಶ್ಯವನ್ನು ವಾಲಿ ಪತ್ನಿ ನೋಡಿ ಅಲ್ಲಿಯೇ ಮೂರ್ಛೆ ಹೋದರಂತೆ. ಟಿವಿ ನೋಡುತ್ತಿದ್ದ ವಾಲಿ ನೆರೆಮನೆಯವ ಅವರಿಬ್ಬರು ವಿಮಾನದಿಂದ ಬಿದ್ದವರು. ಕಾಬುಲ್​ ಅನ್ನು ತಾಲಿಬಾನಿಗಳು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ದೇಶ ತೊರೆಯುವ ಆತುರದಲ್ಲಿ ವಿಮಾನದಿಂದ ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ಎಂದು ಹೇಳಿದಾಗಲೇ ಅಲ್ಲಿ ಏನು ನಡೆದಿದೆ ಎಂಬುದು ವಾಲಿಗೆ ಗೊತ್ತಾಗಿದೆ.

ಹತಾಶೆಯಿಂದ ಕಾಬುಲ್​ ನಗರದಿಂದ ಹೊರಹೋಗುವ ವಿಮಾನ ನಿಲ್ದಾಣದಲ್ಲಿದ್ದ ನೂರರ ಮಂದಿಯ ನಡುವೆ ಮೃತರಿಬ್ಬರು ಇದ್ದರು. ಯುಎಸ್ ವಾಯುಪಡೆಯ ವಿಮಾನದ ಚಕ್ರಗಳಿಗೆ ಅಂಟಿಕೊಂಡಿದ್ದ ಅವರು ಸ್ವಲ್ಪ ಸಮಯದ ನಂತರ ಕೆಳಗೆ ಬಿದ್ದರು. ಅವರಿಬ್ಬರು ವಿಮಾನ ನಿಲ್ದಾಣದಿಂದ ನಾಲ್ಕು ಕಿಮೀ ದೂರದಲ್ಲಿರುವ ವಾಲಿ ಸಾಲೆಕ್ ಅವರ ಮನೆ ಮೇಲೆ ಬಿದ್ದಿದ್ದಾರೆ. ಇದರಿಂದ ವಾಲಿ ಅವರ ಕಟ್ಟಡಕ್ಕೂ ಹಾನಿಯಾಗಿದೆ.

ಮೃತದೇಹಗಳ ಹೊಟ್ಟೆ ಮತ್ತು ತಲೆಗಳು ಒಡೆದಿದ್ದವು. ನಾನು ಶಾಲು ಮತ್ತು ಸ್ಕಾರ್ಫ್ ತೆಗೆದುಕೊಂಡು ಶವಗಳನ್ನು ಮುಚ್ಚಿದೆ. ಒಬ್ಬನ ಜೇಬಿನಲ್ಲಿ ಜನನ ಪ್ರಮಾಣ ಪತ್ರವಿತ್ತು. ಅದರ ಪ್ರಕಾರ ಆತನ ಹೆಸರು ಸಫಿವುಲ್ಲಾ ಹೊಟಕ್​. ಆತ ವೈದ್ಯನಾಗಿದ್ದ. ಇನ್ನೊಬ್ಬನ ಹೆಸರು ಫಿದಾ ಮೊಹಮ್ಮದ್​. ಇಬ್ಬರು ಕೂಡ 30 ವರ್ಷ ಒಳಗಿನ ವಯಸ್ಸಿನವರು ಎಂದು ಸಾಲೆಕ್​ ಹೇಳಿದರು.

"ಕಾಬೂಲ್‌ನ ಬೀದಿಗಳು ನಿರ್ಜನವಾಗಿವೆ ... ಯಾವುದೇ ಪುರುಷ ಅಥವಾ ಮಹಿಳೆಯನ್ನು ನೋಡಲಾಗುವುದಿಲ್ಲ. ಒಂದು ಗಂಟೆಯಿಂದ ಇನ್ನೊಂದು ಗಂಟೆಯವರೆಗೆ ಏನಾಗುತ್ತದೆ ಎಂದು ಕೂಡ ಗೊತ್ತಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಎಲ್ಲೆಡೆ ಭಯದ ವಾತಾವರಣವಿದೆ. ಒಂದು ಅವಕಾಶ ಸಿಕ್ಕರೆ ನಾನು ಕೂಡ ಅಫ್ಘಾನಿಸ್ತಾನ ತೊರೆಯುತ್ತೇನೆ. ಬೇರೆ ಯಾವುದಾದರೂ ದೇಶಕ್ಕೆ ತೆರಳಿ ನೆಲೆಸುತ್ತೇನೆಂದು ವಾಲಿ ಸಲೇಕ್​ ಹೇಳಿದ್ದಾರೆ. (ಏಜೆನ್ಸೀಸ್​)