ನ್ಯೂಸ್

ಐಷಾರಾಮಿ ಕಾರುಗಳೇ ಈತನ ಟಾರ್ಗೆಟ್​: ಬರೋಬ್ಬರಿ 100 ಕಾರು ಕದ್ದಿದ ಖದೀಮ ಸಿಕ್ಕಿಬಿದ್ದಿದ್ದೇ ರೋಚಕ!

ನವದೆಹಲಿ: ಐಷಾರಾಮಿ ಕಾರುಗಳನ್ನೇ ಟಾರ್ಗೆಟ್​ ಮಾಡಿ, ಕದ್ದು ಮಾರಾಟ ಮಾಡುತ್ತಿದ್ದ ಖತರ್ನಾಕ್​ ಖದೀಮನನ್ನು ದೆಹಲಿ ಪೊಲೀಸರು ಬಂದಿಸಿದ್ದಾರೆ.

ಬಂಧಿತನನ್ನು 42 ವರ್ಷದ ಕುನಾಲ್​ ಎಂದು ಗುರುತಿಸಲಾಗಿದೆ. 2003ರಿಂದಲೂ ದುಬಾರಿ ಕಾರುಗಳನ್ನು ಕಳ್ಳತನ ಮಾಡುವುದನ್ನೇ ಕುನಾಲ್​ ಅಭ್ಯಾಸ ಮಾಡಿಕೊಂಡಿದ್ದ. ಆತನಿಂದ ಮೂರು ಕಾರುಗಳು, ನಂಬರ್​ ಪ್ಲೇಟ್​ಗಳು, ಕಾರಿನ ಲಾಕ್​ಗಳು ಮತ್ತು ಬಿಡಿ ಭಾಗಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕದ್ದ ಕಾರನ್ನು ಉತ್ತರ ಪ್ರದೇಶ ಮತ್ತು ಕಾಶ್ಮೀರ ಮುಂತಾದ ಕಡೆ ಕುನಾಲ್​ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಶ್ರೆತಂಕ್​ ಅಗರ್ವಾಲ್​ ಎಂಬುವರು ತಮ್ಮ ಮನೆಯ ಮುಂದೆ ಪಾರ್ಕ್​ ಮಾಡಿದ್ದ ಟೊಯೋಟಾ ಫಾರ್ಚುನರ್​ ಕಾರು ಕಳ್ಳತನ ಆಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಶ್ಮೀರಿ ಗೇಟ್​ನಲ್ಲಿ ಫಾರ್ಚುನರ್​ ಕಾರಿನ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಆತನಿಂದ ವಶಪಡಿಸಿಕೊಂಡ ಕಾರಿನ ನೋಂದಣಿ ಮತ್ತು ನಂಬರ್‌ಗೆ ಯಾವುದೇ ಸಂಬಂಧವಿಲ್ಲ ಎಂಬ ಶಂಕೆಯ ಮೇರೆಗೆ ಅವನನ್ನು ಬಂಧಿಸಲಾಯಿತು. ಇದಾದ ಬಳಿಕ ಆತನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಕುನಾಲ್​ ಸುಮಾರು 100 ಕಾರುಗಳನ್ನು ಕದ್ದಿರುವ ಬಗ್ಗೆ ಮಾಹಿತಿ ದೊರಕಿದೆ.

ತನ್ನನ್ನು ತಾನು ಕಾರ್​ ಕಿಂಗ್​ ಎಂದು ಕರೆದುಕೊಳ್ಳಲು ಬಯಸುತ್ತಿದ್ದ. ದೆಹಲಿಯ ವಿವಿಧ ಪೊಲೀಸ್​ ಠಾಣೆಯಲ್ಲಿ ಆರೋಪಿ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ. ಆರೋಪಿ ಕುನಾಲ್​ ಐಷಾರಾಮಿ ಜೀವನ ನಡೆಸಲು ಐಷಾರಾಮಿ ಕಾರು ಕಳ್ಳತನದಲ್ಲಿ ಆಗಾಗ ಭಾಗಿಯಾಗಿರುವ ಸಂಗತಿ ಬಯಲಾಗಿದ್ದು, ಇದೀಗ ಸಿಕ್ಕಿಬಿದ್ದು ಕಂಬಿ ಎಣಿಸುತ್ತಿದ್ದಾನೆ. (ಏಜೆನ್ಸೀಸ್​)