ನವದೆಹಲಿ: ಅಮೆರಿಕದ ರಿಯಾಲಿಟಿ ಟಿವಿ ಸರಣಿ "ಟೊಡ್ಲರ್ ಆ್ಯಂಡ್ ತೈರಾಸ್" ನಲ್ಲಿ ಭಾಗವಹಿಸಿದ್ದ ಹಾಗೂ ಪ್ರಸಿದ್ಧ ಜಿಐಎಫ್ನ ನಗುವ ಹುಡುಗಿ ಎಂದೇ ಖ್ಯಾತಿಯಾಗಿರುವ ಕೈಲಿಯಾ ಪೋಸಿ 16ನೇ ವರ್ಷದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ವಾಷಿಂಗ್ಟನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸುದ್ದಿಯನ್ನು ಪೋಸಿ ಕುಟುಂಬವೇ ಖಚಿತಪಡಿಸಿದೆ.
ಪೋಸಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪರಿಚಿತ ಮುಖ. ನಗುವ ಹುಡುಗಿ ಎಂದೇ ಕರೆಯುವ ವೈರಲ್ ಜಿಐಎಫ್ನಿಂದ ವಿಶ್ವದಾದ್ಯಂತ ಪೋಸಿ ಪ್ರಖ್ಯಾತಿಯಾಗಿದ್ದಳು. ಹದಿಹರೆಯದ ಪೋಸಿಗೆ ಉಜ್ವಲ ಭವಿಷ್ಯವೇ ಇತ್ತು. ದುರಾದೃಷ್ಟವಶಾತ್ ಆಡಿ ನಲಿಯಬೇಕಾದ ವಯಸ್ಸಿನಲ್ಲಿ ದುಡುಕಿನ ನಿರ್ಧಾರ ತೆಗೆದಿಕೊಂಡು ಮತ್ತೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಆದರೆ, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಪೋಸಿ ಓರ್ವ ಉತ್ತಮ ಸಾಧಕಿಯಾಗಿದ್ದು, ಆಕೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಕಿರೀಟ ಹಾಗೂ ಟ್ರೋಫಿಗಳನ್ನು ಜಯಿಸಿದ್ದಾಳೆ. ವ್ಯಂಗ್ಯಚಿತ್ರಕಾರಳಾಗಿ ಹೆಚ್ಚು ಮೆಚ್ಚುಗೆ ಪಡೆದ ಪ್ರತಿಭೆ ಪೋಸಿ. 16ನೇ ವಯಸ್ಸಿನಲ್ಲೇ ಆಕೆಗೆ ಅನೇಕ ವೃತ್ತಿಪರ ಟೂರಿಂಗ್ ಉದ್ಯೋಗದ ಆಫರ್‌ಗಳು ಬಂದಿತ್ತು.
ಪೋಸಿ ಸಾವಿನ ಸುದ್ದಿಯನ್ನು ಆರಂಭದಲ್ಲಿ ಪೋಸಿ ಅವರ ತಾಯಿ ಮಾರ್ಸಿ ಪೋಸಿ ಗ್ಯಾಟರ್‌ಮ್ಯಾನ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ನನಗೆ ಯಾವುದೇ ಮಾತುಗಳು ಬರುತ್ತಿಲ್ಲ. ಯಾವುದೇ ಆಲೋಚನೆಗಳೂ ಇಲ್ಲ. ಸುಂದರವಾದ ಹೆಣ್ಣು ಮಗು ನಮ್ಮಿಂದ ಕಣ್ಮರೆಯಾಯಿತು. ಕೈಲಿಯಾಳನ್ನು ಕಳೆದುಕೊಂಡು ದುಃಖಿಸುತ್ತಿರುವ ಈ ಸಮಯದಲ್ಲಿ ದಯವಿಟ್ಟು ನಮಗೆ ಗೌಪ್ಯತೆಯನ್ನು ನೀಡಿ ಎಂದು ಬರೆದುಕೊಂಡಿದ್ದಾರೆ.
ಕೆನಡಾದ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ವಾಷಿಂಗ್ಟನ್ ರಾಜ್ಯದ ಬಿರ್ಚ್ ಬೇ ಸ್ಟೇಟ್ ಪಾರ್ಕ್‌ನಲ್ಲಿ ಪೋಸಿ ಅವರ ದೇಹವು ಬುಧವಾರ ಪತ್ತೆಯಾಗಿದೆ ಎಂದು ಹಲವಾರು ಪ್ರಕಟಣೆಗಳು ವರದಿ ಮಾಡಿವೆ. ಆತ್ಮಹತ್ಯೆಯ ಅಪಾಯದಲ್ಲಿರುವ ಇತರರನ್ನು ಆತ್ಮಹತ್ಯೆಯಿಂದ ಹೊರತರಲು ಕುಟುಂಬವು ಪೋಸಿ ಹೆಸರಿನಲ್ಲಿ ದೇಣಿಗೆ ನಿಧಿಯನ್ನು ಸ್ಥಾಪಿಸಿದೆ.
ಕೈಲಿಯಾ ಪೋಸಿ 2009 ರಿಂದ 2013 ರವರೆಗೆ ಟಿಎಲ್ಸಿಯಲ್ಲಿ ಪ್ರಸಾರವಾದ 'ಟೊಡ್ಲರ್ ಮತ್ತು ಟಿಯಾರಾಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಶೋ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ತಮ್ಮ ಮಕ್ಕಳನ್ನು ಸಿದ್ಧಪಡಿಸುವುದು ಶೋ ಆಗಿತ್ತು. (ಏಜೆನ್ಸೀಸ್)