ನ್ಯೂಸ್

ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿ ನಾಯಿಯಂತೆ ಬದಲಾದ ವ್ಯಕ್ತಿ! ಕಾರಣ ಕೇಳಿದ್ರೆ ಹುಬ್ಬೇರಿಸುತ್ತೀರಾ!

ಟೋಕಿಯೋ: ಕೆಲವು ಜನರಿಗೆ ಎಂತೆಂಥಾ ವಿಚಿತ್ರ ಆಸೆಗಳು ಇರ್ತಾವೆ ಅಂದ್ರೆ ಅದನ್ನು ಕೇಳಿದ ಕೂಡಲೇ ನಮ್ಮ ಹುಬ್ಬೇರುತ್ತದೆ. ಅಂಥದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಜಪಾನ್​ ಮೂಲದ ವ್ಯಕ್ತಿಯೊಬ್ಬನ ಆಸೆ ತುಂಬಾ ವಿಚಿತ್ರ ಅನಿಸದೇ ಇರದು. ಏಕೆಂದರೆ, ಸಾಮಾನ್ಯವಾಗಿ ಎಲ್ಲರೂ ರಾಜನಂತಿರಬೇಕೆಂದು ಬಯಸುತ್ತಾರೆ. ಆದರೆ, ಈತ ಕೆಲ ಕಾಲ ನಾಯಿಯಂತೆ ಇರಬೇಕೆಂಬ ಆಸೆ ಹೊಂದಿದ್ದಾನೆ. ಅದಕ್ಕಾಗಿ ಆತ ಖರ್ಚು ಮಾಡಿರುವ ಹಣದ ಒಟ್ಟು ಮೊತ್ತ ಕೇಳಿದರಂತೂ ನಿಮಗೆ ಅಚ್ಚರಿಯಾಗುವುದಂತೂ ಖಂಡಿತ.

ಹೌದು, ಜಪಾನ್​ ಮೂಲದ ವ್ಯಕ್ತಿ ನಾಯಿಯಂತೆ ಕಾಣಬೇಕೆಂಬ ತನ್ನ ಜೀವಮಾನದ ಆಸೆಯನ್ನು ನನಸು ಮಾಡಿಕೊಂಡಿದ್ದಾನೆ. @toco_eevee ಎಂಬ ಟ್ವಿಟರ್​ ಬಳಕೆದಾರ ನಾಯಿಯಂತೆ ಬದಲಾಗಿರುವ ಫೋಟೋವನ್ನು ಪೋಸ್ಟ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಫೋಟೋದಲ್ಲಿರುವಂತೆ ಜಪಾನ್​ ವ್ಯಕ್ತಿ, ನಾಯಿಯ ಒಂದು ತಳಿ "ಕೋಲಿ"ಯಂತೆ ಬದಲಾಗಿದ್ದಾನೆ. ಝೆಪ್ಪೆಟ್​ ಹೆಸರಿನ ವೃತ್ತಿಪರ ಏಜೆನ್ಸಿ ಜಪಾನ್​ ವ್ಯಕ್ತಿಯ ಆಸೆಯನ್ನು ನೆರವೇರಿಸಿದೆ.

ನ್ಯೂಸ್​ ಮೈನವಿ ಹೆಸರಿನ ಜಪಾನ್​ ಮಾಧ್ಯಮ ಪ್ರಕಾರ ಝೆಪ್ಪೆಟ್​ ಕಂಪನಿಯು ಸಿನಿಮಾ, ಜಾಹೀರಾತು ಸೇರಿಂದತೆ ಮನೋರಂಜನಾ ಉದ್ದೇಶಕ್ಕಾಗಿ ಬೇಕಾಗುವ ಶಿಲ್ಪಕಲೆಗಳನ್ನು ಒದಗಿಸುತ್ತದೆ ಮತ್ತು ಟಿವಿಯಲ್ಲಿ ಬರುವ ವೇಷಭೂಷಣಗಳನ್ನು ಮತ್ತು ಜಪಾನ್‌ನ ಪ್ರಸಿದ್ಧ ಮ್ಯಾಸ್ಕಾಟ್ ಪಾತ್ರಗಳ ವೇಷಭೂಷಣಗಳನ್ನು ಈ ಕಂಪನಿ ಉತ್ಪಾದಿಸುತ್ತದೆ. ಜಪಾನ್​ನಲ್ಲಿ ಈ ಕಂಪನಿಗೆ ಒಳ್ಳೆಯ ಹೆಸರಿದೆ.

ಇದೀಗ ಜಪಾನ್​ ವ್ಯಕ್ತಿಗೂ ಕೂಡ ಇದೇ ಕಂಪನಿ ನಾಯಿಯಂತೆ ಕಾಣುವ ಉಡುಪನ್ನು ಡಿಸೈನ್​ ಮಾಡಿ ನೀಡಿದೆ. ಕೋಲಿ ನಾಯಿಯ ರೀತಿಯ ಕಾಸ್ಟ್ಯೂಮ್​ ಡಿಸೈನ್​ ಮಾಡಲು ಬರೋಬ್ಬರಿ ಎರಡು ಮಿಲಿಯನ್​ ಯೆನ್​ (12 ಲಕ್ಷ ರೂ.) ವೆಚ್ಚವಾಗಿದೆ. ಅಲ್ಲದೆ, 40 ದಿನ ತೆಗೆದುಕೊಂಡಿದೆ.

ಅಂದಹಾಗೆ ನಾಯಿಯಂತೆ ಬದಲಾದ ಜಪಾನ್​ ವ್ಯಕ್ತಿಯ ಹೆಸರು ಟೋಕೋ. ಈತ ಮೈನವಿ ನ್ಯೂಸ್​ ಜತೆ ಮಾತನಾಡಿದ್ದಾನೆ. ಕೋಲಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಟೊಕೊ, ನಾನು ವೇಷಭೂಷಣವನ್ನು ಹಾಕಿದಾಗ ನಿಜವಾಗಿಯೂ ಕೋಲಿಯಂತೆ ಕಾಣುವ ಕಾರಣ ನಾನು ಅದನ್ನು ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ. ನಾಲ್ಕು ಕಾಲಿನ ಪ್ರಾಣಿಗಳು ಅಂದರೆ ನನಗೆ ತುಂಬಾ ಅಚ್ಚಿಮೆಚ್ಚಿನವು. ಅವುಗಳಲ್ಲಿ ನನಗೆ ಹತ್ತಿರ ಇರುವ ದೊಡ್ಡ ಪ್ರಾಣಿ ಚೆನ್ನಾಗಿರುತ್ತೆ ಮತ್ತು ರಿಯಲಿಸ್ಟಿಕ್ ಮಾಡೆಲ್ ಆಗುತ್ತದೆ ಅಂತ ಯೋಚಿಸಿ ನಾಯಿಯಂತೆ ಬದಲಾಗುವುದಕ್ಕೆ ನಿರ್ಧರಿಸಿದೆ ಎಂದಿದ್ದಾರೆ. ಕೋಲಿ ನನ್ನ ನೆಚ್ಚಿನ ನಾಯಿ ಎಂದು ತಿಳಿಸಿದ್ದಾರೆ.

ತನ್ನ ಅಂಗಗಳನ್ನು ಮುಕ್ತವಾಗಿ ಚಲಿಸಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಟೋಕೋ, ಮುಕ್ತವಾಗಿ ಆಗುವುದಿಲ್ಲ. ಏಕೆಂದರೆ, ಇಲ್ಲಿ ಕೆಲವು ನಿರ್ಬಂಧಗಳಿವೆ. ನೀವು ಮುಕ್ತವಾಗಿ ಚಲಿಸಿದರೆ ನಾಯಿಯಂತೆ ಕಾಣುವುದಿಲ್ಲ. ಹೀಗಾಗಿ ನಿರ್ಬಂಧಗಳನ್ನು ಅನಸರಿಸಲೇಬೇಕು ಎಂದಿದ್ದಾರೆ.

ಟೋಕೊ ತನ್ನದೇ ಆದ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾನೆ. ನಾಯಿಯಂತೆ ಬದಲಾಗಿರುವ ವಿಡಿಯೋವನ್ನು ಅಪ್​ಲೋಡ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋದಲ್ಲಿ ಟೋಕೊ ಥೇಟ್​ ನಾಯಿಯಂತೆ ಕಾಣುತ್ತಾರೆ. ನಾಯಿಯ ವೇಷಭೂಷಣದಲ್ಲಿ ಹೊರಗಿನಿಂದ ಟೋಕೊ ಅವರ ಅಸಲಿ ಮುಖವನ್ನು ಪತ್ತೆ ಮಾಡುವುದು ತುಂಬಾ ಕಷ್ಟ. ಸದ್ಯ ನಾಯಿಯ ಕಾಸ್ಟ್ಯೂಮ್​ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)