ನ್ಯೂಸ್

ಅದ್ಧೂರಿ ಮದ್ವೆಯಲ್ಲಿ ವರನ ಉಡುಗೆ ನೋಡಿ ಅತಿಥಿಗಳು ಕಕ್ಕಾಬಿಕ್ಕಿ: ಕಾರಣ ಕೇಳಿದ್ರೆ ಅಯ್ಯೋ ಪಾಪ ಅಂತಿರಾ!

ಜಕಾರ್ತ: ಮದುವೆ ಅಂದರೆ ಎಲ್ಲವೂ ಅದ್ಧೂರಿಯಾಗಿಯೇ ಇರುತ್ತದೆ. ಅದರಲ್ಲೂ ಮದುವೆಯ ಕೇಂದ್ರ ಬಿಂದುವಾದ ವಧು-ವರರು ಬಗೆಬಗೆಯ ಉಡುಗೆಯಲ್ಲಿ ಸಖತ್​ ಮಿಂಚುತ್ತಿರುತ್ತಾರೆ. ಆದರೆ, ಇಂಡೋನೇಷ್ಯಾದಲ್ಲಿ ನಡೆದ ಈ ಒಂದು ಮದುವೆಯಲ್ಲಿ ವರನ ಉಡುಗೆಯನ್ನು ನೋಡಿದರೆ ತಲೆ ಕೆರೆದುಕೊಳ್ಳುವುದು ಗ್ಯಾರೆಂಟಿ.

ಇಂಡೋನೇಷ್ಯಾದ ಪೂರ್ವ ಜಾವಾ ವಲಯದಲ್ಲಿನ ಯುವ ಜೋಡಿ ಜೀವನದಲ್ಲೇ ತುಂಬಾ ಮಹತ್ವದ ದಿನವಾದ ವಿವಾಹದಂದೇ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ಮದುವೆ ಬಂದಿದ್ದ ಅತಿಥಿಗಳನ್ನು ಅಚ್ಚರಿಗೆ ದೂಡಿದ್ದಾರೆ.

ವಧು ಚಿನ್ನಾಭರಣಗಳೊಂದಿಗೆ ಜವಾನೀಸ್​ ಸಾಂಪ್ರದಾಯಿಕ ಉಡುಗೆಯಿಂದ ಕಂಗೊಳಿಸಿದರೆ, ವರ ಕೇವಲ ಕೆಂಪು ಶಾರ್ಟ್ಸ್​ ಧರಿಸಿ ಮೈ ತುಂಬಾ ಬ್ಯಾಂಡೇಜ್​ ಅಂಟಿಸಿಕೊಂಡು, ಕೈಗೆ ತೂಗುಪಟ್ಟಿ ಹಾಕಿಕೊಂಡು ಕಾಣಿಸಿಕೊಂಡಿದ್ದು ನೋಡುಗರಿಗೆ ವಿಚಿತ್ರವಾಗಿತ್ತು.

ಮಾಧ್ಯಮಗಳ ಪ್ರಕಾರ ಏಪ್ರಿಲ್​ 2ರಂದು ಎಲಿಂದ ದ್ವಿ ಕ್ರಿಸ್ಚಿಯನಿ ಸುಪ್ರಪ್ಟೋ ಎಂಬಾತನನ್ನು ವರಿಸಿದ್ದಾರೆ. ಮದುವೆಗೂ ನಾಲ್ಕು ದಿನಗಳ ಮುನ್ನ ಸುಪ್ರಪ್ಟೋಗೆ ಬೈಕ್​ನಲ್ಲಿ ಬರುವಾಗ ಅಪಘಾತವಾಗಿತ್ತು. ಈ ವೇಳೆ ಆತ ಗಾಯಗೊಂಡಿದ್ದ. ಇದಾದ ಬಳಿಕ ಎರಡು ಕುಟುಂಬದವರು ಮದುವೆಯನ್ನು ಮುಂದೂಡಲು ನಿರ್ಧಿರಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಮದುವೆ ಎಲ್ಲಾ ಸಿದ್ಧತೆಗಳು ನಡೆದಿದ್ದರಿಂದ ಮದುವೆ ನಿಲ್ಲಿಸಿವುದು ಬೇಡವೆಂದು ಕೊನೆಗೂ ಮದುವೆ ಮಾಡಿದ್ದಾರೆ.

ತೀವ್ರ ಗಾಯಗಳಾಗಿದ್ದರಿಂದ ಮದುವೆ ಉಡುಗೆ ಧರಿಸಲು ಸಾಧ್ಯವಾಗದಿದ್ದರಿಂದ ವರ ಹಾಗೇಯೇ ಮದುವೆ ಮಂಟಪದಲ್ಲಿ ಕೂರಬೇಕಾಯಿತು. ಈ ವಿಶೇಷ ಮದುವೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್​ ಆಗಿದೆ. (ಏಜೆನ್ಸೀಸ್​)