ನ್ಯೂಸ್

ಸಾಯಿ ಪಲ್ಲವಿ ತುಂಡುಡುಗೆ ತೊಡದಿರಲು ಈ ಒಂದು ಕೆಟ್ಟ ಘಟನೆಯೇ ಕಾರಣ! ನೊಂದು ಕಣ್ಣೀರು ಹಾಕಿದ್ದರಂತೆ...

ಚೆನ್ನೈ: ಸಾಯಿ ಪಲ್ಲವಿ… ಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿದ ಹೆಚ್ಚಿಸುತ್ತದೆ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಅವರ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳಿಗೆ ಅಲ್ಲದೇ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಜನ ಚರ್ಚಿಸುತ್ತಾರೆ. ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಜೊತೆಗೆ, ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ. ಅಲ್ಲದೆ, ಜನರ ನಂಬಿಕೆಗೆ ದ್ರೋಹ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಸಿನಿ ರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಸಾಯಿ ಪಲ್ಲವಿ ಕುರಿತು ಒಂದು ಆಸಕ್ತಿದಾಯಕ ವಿಚಾರ ಬೆಳಕಿಗೆ ಬಂದಿದೆ.

ಸಾಯಿ ಪಲ್ಲವಿ ಅವರು ತೆಲುಗು ಚಿತ್ರರಂಗದಲ್ಲಿ ಹೆಚ್ಚು ತೊಡಗಿಕೊಂಡಿದ್ದು, ಅವರನ್ನು ಲೇಡಿ ಪವರ್​ ಸ್ಟಾರ್​ ಎಂದೇ ಅಲ್ಲಿ ಕರೆಯುತ್ತಾರೆ. ಎಲ್ಲಿಯೂ ಮೈಮಾಟ ಪ್ರದರ್ಶಿಸದೇ ಡಿ-ಗ್ಲಾಮರಸ್ ಪಾತ್ರಗಳಲ್ಲಿ ಅದ್ಭುತ ನಟನೆಯ ಮೂಲಕವೇ ಸ್ಟಾರ್​ ನಟಿ ಎಂಬ ಪಟ್ಟವನ್ನು ಗಿಟ್ಟಿಸಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿ ಪಲ್ಲವಿ ತಾವೇಕೆ ಮೈಮಾಟ ಪ್ರದರ್ಶಿಸುವುದಿಲ್ಲ ಮತ್ತು ಮೈ ತುಂಬಾ ಬಟ್ಟೆ ಧರಿಸುತ್ತಾರೆ ಎಂಬುದಕ್ಕೆ ಉತ್ತರ ನೀಡಿದ್ದಾರೆ.

ನಾನು ಸಂಪ್ರದಾಯ ಕುಟುಂಬದಿಂದ ಬಂದವಳು. ನನ್ನ ತಂದೆ ಕೇಂದ್ರ ಸರ್ಕಾರದ ಉದ್ಯೋಗಿ. ನನಗೆ ಓರ್ವ ತಂಗಿ ಇದ್ದಾಳೆ. ನಾವಿಬ್ಬರು ಮನೆಯಲ್ಲಿ ಉಚಿತ ಸಮಯದಲ್ಲಿ ಬ್ಯಾಡ್ಮಿಂಟನ್​ ಆಡುತ್ತೇವೆ. ಆಟವಾಡುವಾಗ ಇಬ್ಬರು ಸೂಕ್ತ ಎನಿಸುವ ಉಡುಗೆ ಧರಿಸುತ್ತೇವೆ. ಆದರೆ, ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ನೀಡಿದಾಗ ನಡೆದ ಆ ಒಂದು ಘಟನೆ ನಾನು ಡಿ-ಗ್ಲಾಮರಸ್​ ಪಾತ್ರಗಳಲ್ಲಿ ಮಾತ್ರ ನಟಿಸುವ ನಿರ್ಧಾರ ಮಾಡಿಸಿತು ಎಂದಿದ್ದಾರೆ.

ನನ್ನ ಶಿಕ್ಷಣವನ್ನು ಮುಂದುವರಿಸಲು ನಾನು ಜಾರ್ಜಿಯಾಕ್ಕೆ ಹೋದಾಗ, ನಾನು ಟ್ಯಾಂಗೋ ನೃತ್ಯವನ್ನು ಕಲಿತೆ. ಟ್ಯಾಂಗೋ ನೃತ್ಯವನ್ನು ಕಲಿಯಲು ನೀವು ವಿಶೇಷ ವೇಷಭೂಷಣಗಳನ್ನು ಧರಿಸಬೇಕು ಎಂದರು. ನಾನು ಈ ಸಂಗತಿಯನ್ನು ನನ್ನ ಪೋಷಕರಿಗೆ ಹೇಳಿದೆ ಮತ್ತು ಅವರ ಅನುಮತಿಯೊಂದಿಗೆ ಆ ವೇಷಭೂಷಣಗಳಲ್ಲಿ ನಾನು ಆರಾಮದಾಯಕವಾದ ನಂತರ, ನೃತ್ಯವನ್ನು ಕಲಿಯಲು ಪ್ರಾರಂಭಿಸಿದೆ ಎಂದರು.

ಕೆಲವು ತಿಂಗಳುಗಳ ಬಳಿಕ ಪ್ರೇಮಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ನನ್ನ ಟ್ಯಾಂಗೋ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯಿತು. ಈ ವೇಳೆ ವಿಡಿಯೋಗೆ ನೆಟ್ಟಿಗರು ಮಾಡಿದ ಕಾಮೆಂಟ್​ ನನ್ನ ಹೃದಯವನ್ನು ಘಾಸಿ ಮಾಡಿತು. ಕಾಮೆಂಟ್​ಗಳನ್ನು ಓದಿ ತುಂಬಾ ನೊಂದುಕೊಂಡು ಕಣ್ಣೀರಾಕಿದ್ದೆ. ಅಂದಿನಿಂದ ಪೂರ್ಣ ಪ್ರಮಾಣದ ಉಡುಗೆ ತೊಡುವ ನಿರ್ಧಾರಕ್ಕೆ ಬಂದೆ. ಯಾವುದೇ ಕಾರಣಕ್ಕೂ ಡಿ-ಗ್ಲಾಮರಸ್​​ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಾಯಿ ಪಲ್ಲವಿ ಅವರು ವಿರಾಟ ಪರ್ವಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ವೇಣು ಉಡುಗುಲ ನಿರ್ದೇಶನದ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸಿದ್ದಾರೆ. ಇದೇ ಜೂನ್ 17 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)