More

    ಅತಿಥಿಗಳ ಗೋಳಿಗಿಲ್ಲ ಕೊನೆ; ಬೀದಿಗೆ ಬಿದ್ದ ವಸತಿ ಶಾಲೆಗಳ ಅತಿಥಿ ಶಿಕ್ಷಕರು  

    |ನವೀನ್ ಬಿಲ್ಗುಣಿ ಶಿವಮೊಗ್ಗ

    ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಮಾತಿದೆ. ಅದರಂತೆ, ರಾಜ್ಯದ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಪಾಲಿಗೆ ಅಧಿಕಾರಿಗಳು ಪೂಜಾರಿಗಳಾಗಿದ್ದಾರೆ! ಇದರಿಂದ ನೂರಾರು ಅತಿಥಿ ಶಿಕ್ಷಕರ ಬದುಕು ಬೀದಿಗೆ ಬಿದ್ದಿದೆ. ಸಾವಿರಾರು ಶಿಕ್ಷಕರ ಭವಿಷ್ಯ ಅತಂತ್ರ ಸ್ಥಿತಿ ತಲುಪಿದೆ.

    ರಾಜ್ಯದ 832 ವಸತಿ ಶಾಲೆಗಳಲ್ಲಿ 2,000ಕ್ಕೂ ಹೆಚ್ಚು ಅತಿಥಿ ಶಿಕ್ಷಕರಿದ್ದು ಈ ಪೈಕಿ 136 ಶಿಕ್ಷಕರ ಕೆಲಸ ಕಾಯಂಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಅತಿಥಿ ಶಿಕ್ಷಕರನ್ನು ನಿಯಮಾನುಸಾರ ಮುಂದುವರಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇದು ಇನ್ನೂ ಪಾಲನೆ ಆಗಿಲ್ಲ. ಇದರಿಂದ ಈಗಾಗಲೆ 60ಕ್ಕೂ ಅಧಿಕ ಶಿಕ್ಷಕರು ಕೆಲಸ ಕಳೆದುಕೊಂಡಿದ್ದು, ನೂರಾರು ಶಿಕ್ಷಕರ ಮೇಲೆ ತೂಗá-ಗತ್ತಿ ನೇತಾಡುತ್ತಿದೆ.ಕಳೆದ 8-10 ವರ್ಷಗಳಿಂದ ರಾಜ್ಯದ ಮುರಾರ್ಜಿ ದೇಸಾಯಿ, ಇಂದಿರಾಗಾಂಧಿ, ಅಂಬೇಡ್ಕರ್, ರಾಣಿ ಚನ್ನಮ್ಮ, ವಾಜಪೇಯಿ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ. ಕಾಯಂಗೊಳಿಸುವ ಬದಲು ರಾಜ್ಯ ಸರ್ಕಾರವೇ ಕರ್ತವ್ಯ ದಿಂದ ಶಿಕ್ಷಕರನ್ನು ಬಿಡುಗಡೆ ಗೊಳಿಸುತ್ತಿದೆ. ಇದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಶಿಕ್ಷಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    60ಕ್ಕೂ ಅಧಿಕ ಮಂದಿ ಔಟ್: ಸರ್ಕಾರ ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದರಿಂದ 60ಕ್ಕೂ ಅಧಿಕ ಅತಿಥಿ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನುಳಿದವರೂ ಕೆಲಸ ಕಳೆದು ಕೊಳ್ಳುವುದರಲ್ಲಿ ಅನುಮಾನವಿಲ್ಲ ವೆಂದು 832 ವಸತಿ ಶಾಲೆಗಳ ಅತಿಥಿ ಶಿಕ್ಷಕರು ಚಿಂತೆಗೀಡಾಗಿದ್ದಾರೆ.

    ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ: ವೇತನ ಪರಿಷ್ಕರಣೆ, ನೇಮಕಾತಿ ಕಾಯಂ ಹಾಗೂ ಅದೇ ಶಾಲೆಗಳಲ್ಲಿ ಮುಂದುವರಿಸುವಂತೆ 136 ಅತಿಥಿ ಶಿಕ್ಷಕರು 2018ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಶಿಕ್ಷಕರ ಮನವಿ ಪುರಸ್ಕರಿಸಿದ ನ್ಯಾಯಾಲಯ 2019ರ ಜ.18ರಂದು ಆರು ವಾರದಲ್ಲೇ ವಸತಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನೇ ಕಾಯಂಗೊಳಿಸುವುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆದೇಶ ನೀಡಿತ್ತು. ಆದರೆ ಇದು ವರೆಗೂ ಹೈಕೋರ್ಟ್ ಆದೇಶಕ್ಕೆ ಕ್ರೖೆಸ್ ಕಿಮ್ಮತ್ತು ನೀಡಿಲ್ಲ.ವಸತಿ ಶಾಲೆ ಗಳಲ್ಲಿ 2001-2005ನೇ ಸಾಲಿನವರೆಗೆ ಕೆಲಸ ಮಾಡಿದ್ದ 800 ಅತಿಥಿ ಶಿಕ್ಷಕರನ್ನು ಸರ್ಕಾರ ಕಾಯಂಗೊಳಿಸಿದೆ. ಅದೇ ಮಾದರಿಯಲ್ಲಿ 8-10 ವರ್ಷಗಳಿಂದ ಕೆಲಸ ಮಾಡಿದ ಅತಿಥಿ ಶಿಕ್ಷಕರನ್ನು ಸೇವಾ ಹಿರಿತನದ ಮೇಲೆ ಕಾಯಂ ಮಾಡಬೇಕೆಂಬುದು ಶಿಕ್ಷಕರ ಪ್ರಮುಖ ಬೇಡಿಕೆ.

    ಹೈಕೋರ್ಟ್ ಆದೇಶವಿದ್ದರೂ ಕ್ರೖೆಸ್ ಕಾರ್ಯನಿರ್ವಾಹಕ ನಿರ್ದೇಶಕರು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ 60ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಈಗಾಗಲೆ ಕೆಲಸ ಕಳೆದುಕೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಉಳಿದವರ ಕುಟುಂಬಗಳೂ ಬೀದಿಗೆ ಬೀಳಲಿವೆ

    | ಆನಂದ ಎಸ್.ಅಕ್ಕೂರ ಅಖಿಲ ಕರ್ನಾಟಕ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಸಂಘದ ಮಹಾಒಕ್ಕೂಟದ ಅಧ್ಯಕ್ಷ

    ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವ ಸಂಬಂಧ ಎಂಎಲ್​ಸಿ ಎ. ದೇವೇಗೌಡ ಅವರು ವಿಧಾನಪರಿಷತ್​ನಲ್ಲಿ ಪ್ರಸ್ತಾಪಿಸಿದ್ದರು. ಅವರ ಮನವಿಯಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರಕ್ಕೆ ಪತ್ರ ಬರೆದು ಆದೇಶಿಸಿದ್ದಾರೆ. ಸಮಾಜಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಪಿ.ಎನ್.ನಾಗರಾಜ್ ಅವರು ಏ.6ರಂದೇ ಕ್ರೖೆಸ್(ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘ)ನ ಕಾರ್ಯನಿರ್ವಾಹಕ ನಿರ್ದೇಶನಾಲಯಕ್ಕೆ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಮುಂದುವರಿಕೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ ಕ್ರೖೆಸ್ ಕಾರ್ಯನಿರ್ವಾಹಕ ನಿರ್ದೇಶಕರು ನಿರಾಸಕ್ತಿ ತೋರುತ್ತಿದ್ದಾರೆ.

    ವಯೋಮಿತಿ ಮೀರುವ ಆತಂಕ

    ಬಹಳಷ್ಟು ಶಿಕ್ಷಕರು 10ಕ್ಕೂ ಹೆಚ್ಚು ವರ್ಷಗಳಿಂದ ಬೋಧನೆ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿರುವ ಈ ಅತಿಥಿ ಶಿಕ್ಷಕರಿಗೆ ಇದೀಗ ವಯೋಮಿತಿ ಮೀರುವ ಭಯವೂ ಕಾಡಲಾರಂಭಿಸಿದೆ. ಹಲವು ವರ್ಷಗಳಿಂದ ಕನಿಷ್ಠ 10 ಸಾವಿರ ರೂ.ಗೆ ದುಡಿಯುತ್ತಿದ್ದೇವೆ. ಸೇವಾಭದ್ರತೆ ಕೂಡ ಇಲ್ಲ. ಇದೀಗ ಏಕಾಏಕಿ ಸರ್ಕಾರ ಕೆಲಸದಿಂದ ತೆಗೆದುಹಾಕಿದರೆ ಬೇರೆಡೆ ಹೋಗುವುದಕ್ಕೂ ಆಗುವುದಿಲ್ಲ. ವಯೋಮಿತಿ ಮೀರುತ್ತಿದ್ದು ಸರ್ಕಾರಿ ಕೆಲಸ ಕೂಡ ಸಿಗುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅತಿಥಿ ಶಿಕ್ಷಕರು ಗೋಳು ತೋಡಿಕೊಂಡರು.

    ಕಡಿಮೆ ಗೌರವಧನಕ್ಕೆ ಕೆಲಸ

    ಹರೀಶ್ ಮೋಟುಕಾನ, ಮಂಗಳೂರು

    ಉನ್ನತ ಶಿಕ್ಷಣ ಪಡೆದು ಮಕ್ಕಳ ಭವಿಷ್ಯ ಬೆಳಗುವ ಅತಿಥಿ ಶಿಕ್ಷಕರ ಗೌರವ ಧನ ಗುತ್ತಿಗೆ ‘ಡಿ’ ದರ್ಜೆ ನೌಕರರಿಗಿಂತಲೂ ಕಡಿಮೆ! ಇವರಿಗೆ ಇಎಸ್​ಐ, ಪಿಎಫ್ ಸೇರಿ ಯಾವುದೇ ಸೌಲಭ್ಯವಿಲ್ಲ. ಉದ್ಯೋಗ ಭದ್ರತೆಯೂ ಇಲ್ಲ.2022-23ನೇ ಸಾಲಿಗೆ ಕಾರ್ವಿುಕ ಇಲಾಖೆ ವತಿಯಿಂದ ಕನಿಷ್ಠ ವೇತನ ಕಾಯ್ದೆಯಡಿ ಗುತ್ತಿಗೆ ‘ಡಿ’ ಗ್ರೂಪ್ ನೌಕರರಿಗೆ ತಿಂಗಳಿಗೆ 13,642 ರೂ., ಚಾಲಕರಿಗೆ 14,676 ರೂ. ಹಾಗೂ ಡೇಟಾ ಎಂಟ್ರಿ ಆಪರೇಟರ್​ಗಳಿಗೆ 15,996 ರೂ. ನಿಗದಿಪಡಿಸಲಾಗಿದೆ. ಆದರೆ ಪ್ರಾಥಮಿಕ ಶಾಲಾ ವಿಭಾಗದ ಅತಿಥಿ ಶಿಕ್ಷಕರಿಗೆ 7,500 ರೂ. ಹಾಗೂ ಪ್ರೌಢಶಾಲಾ ವಿಭಾಗದವರಿಗೆ 8 ಸಾವಿರ ರೂ.ಗೌರವ ಧನ ನಿಗದಿಪಡಿಸಲಾಗಿದೆ. ಈ ತಾರತಮ್ಯದ ವಿರುದ್ಧ ಅತಿಥಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಒಟ್ಟು 27 ಸಾವಿರ ಅತಿಥಿ ಶಿಕ್ಷಕರನ್ನು ಈ ಬಾರಿ ನೇಮಕ ಮಾಡಿಕೊಳ್ಳಲಾಗಿದೆ. 2017ರಿಂದಲೂ ಗೌರವ ಧನ ಹೆಚ್ಚಿಸಿಲ್ಲ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹಲವು ಬಾರಿ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ.

    ಅನುಭವಿಗಳಿಗೆ ಸಿಗುತ್ತಿಲ್ಲ ಆದ್ಯತೆ: ಅತಿಥಿ ಶಿಕ್ಷಕರನ್ನು ಜೂನ್​ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಂಡು ಮಾರ್ಚ್​ನಲ್ಲಿ ಬಿಡುಗಡೆಗೊಳಿಸುತ್ತಾರೆ. ಮುಂದಿನ ವರ್ಷ ಮತ್ತೆ ಸಂದರ್ಶನ ಎದುರಿಸಿ ಆಯ್ಕೆಯಾಗಬೇಕು. ಹೆಚ್ಚಾಗಿ ಕೋರ್ಸ್ ಮುಗಿಸಿ ಬಂದವರಿಗೆ ಆದ್ಯತೆ ನೀಡುತ್ತಾರೆ. ಕೆಲವು ಕಡೆ ಏಳೆಂಟು ವರ್ಷ ಕೆಲಸ ಮಾಡಿ ಅನುಭವ ಇರುವವರು ಮುಖ್ಯ ಶಿಕ್ಷಕಿಯರ ರಾಜಕೀಯದಿಂದ ಈ ವರ್ಷ ನೇಮಕಗೊಂಡಿಲ್ಲ. ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟುವ, ಕೂಲಿ ಕೆಲಸಕ್ಕೆ ಹೋಗುವ ಡಿ.ಎಡ್ ಪದವೀಧರರು ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

    ‘777 ಚಾರ್ಲಿ’ ಚಿತ್ರ ವೀಕ್ಷಿಸಿದ ಶ್ವಾನ ಪ್ರೇಮಿ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts