ಕಾಮರೆಡ್ಡಿ: ಹೊಸ ಹೊಸ ಮೋಸದ ದಾರಿ ಕಂಡುಕೊಂಡು ಅಮಾಯಕರನ್ನು ಯಾಮಾರಿಸುವುದೇ ನಯವಂಚಕರ ಕೆಲಸ. ತೆಲಂಗಾಣದ ಕಾಮರೆಡ್ಡಿಯಲ್ಲಿ ವಂಚಕರು ಹಣ ಪೀಕಲು ಕಂಡುಕೊಂಡಿರುವ ತಪ್ಪು ದಾರಿಯ ಬಗ್ಗೆ ತಿಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ...
ಹೌದು, ಹಳೆಯ 5 ರೂಪಾಯಿ ನೋಟಿದ್ದರೆ 5 ಲಕ್ಷ ರೂ. ನೀಡುತ್ತವೆಂದು ನರ್ಸ್ ಒಬ್ಬರಿಗೆ ಯಾಮಾರಿಸಿರುವ ಘಟನೆ ಕಾಮರೆಡ್ಡಿ ವಲಯದ ಚಿನ್ನಮಲ್ಲರೆಡ್ಡಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ.
ಕಸ್ತೂರಿ ಹೆಸರಿನ ನರ್ಸ್ ಇದೇ ತಿಂಗಳ ಒಂದನೇ ತಾರೀಖಿನಂದು ಒಂದು ದೂರವಾಣಿ ಕರೆಯನ್ನು ಸ್ವೀಕರಿಸುತ್ತಾರೆ. ಫೋನ್ನಲ್ಲಿ ಮಾತನಾಡಿದ ವ್ಯಕ್ತಿ ನಿಮ್ಮ ಬಳಿ ಟ್ರ್ಯಾಕ್ಟರ್ನಿಂದ ರೈತ ಉಳುಮೆ ಮಾಡುತ್ತಿರುವ ಚಿತ್ರವುಳ್ಳ 5 ರೂಪಾಯಿ ನೋಟಿದ್ದರೆ 11.74 ಲಕ್ಷ ರೂಪಾಯಿ ನೀಡುವುದಾಗಿ ಹೇಳುತ್ತಾರೆ. ಸದ್ಯ ಅಪರೂಪವಾಗಿರುವ ಈ ನೋಟಿಗೆ ಬಹಳ ಬೇಡಿಕೆ ಇದೆ. ಹೀಗಾಗಿ ಅದನ್ನು ಕೊಟ್ಟರೆ ನಿಮಗೆ ಲಕ್ಷ...ಲಕ್ಷ ಹಣ ಸಿಗಲಿದೆ ಎಂದು ನಂಬಿಸುತ್ತಾರೆ.
ಫೋನ್ನಲ್ಲಿ ಹೇಳಿದ ಮಾತನ್ನು ಕೇಳಿದ ನರ್ಸ್ ಹಿಂದೆ-ಮುಂದೆ ವಿಚಾರಿಸದೇ ಅದನ್ನು ನಂಬುತ್ತಾಳೆ. ತನ್ನ ಬಳಿ ಆ ನೋಟು ಇರುವುದಾಗಿಯು ಹೇಳುತ್ತಾಳೆ. ಬಳಿಕ ವಂಚಕರು ತಮ್ಮ ಅಸಲಿ ಮುಖವಾಡವನ್ನು ಕಳಚುತ್ತಾರೆ. ಮೊದಲು ಖಾತೆಯೊಂದನ್ನು ತೆರೆಯಲು ಹೇಳುತ್ತಾರೆ. ಅನೇಕ ಇನ್ಸ್ಟಾಲ್ಮೆಂಟ್ನಲ್ಲಿ ಹಣ ನಿಮ್ಮ ಖಾತೆಗೆ ದಾಖಲಾಗುತ್ತದೆ. ಅದಕ್ಕೂ ಮುನ್ನ ಐಟಿ ಕ್ಲಿಯರೆನ್ಸ್ ಮಾಡಬೇಕೆಂದು ಹೇಳಿ ಆಕೆಯಿಂದ 8.35 ಲಕ್ಷ ರೂ. ಕೀಳುತ್ತಾರೆ. ಇದಾದ ಬಳಿಕ ಇನ್ನು ಹೆಚ್ಚಿನ ಹಣಕ್ಕೆ ಅವರ ಬೇಡಿಕೆ ಇಟ್ಟಾಗ ಅನುಮಾನ ಬಂದು ನರ್ಸ್ ಸ್ಥಳೀಯ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಫೋನ್ ಕಾಲ್ ಪಶ್ಚಿಮ ಬಂಗಾಳದಿಂದ ಬಂದಿರುವುದಾಗಿ ಹೇಳಿದ್ದಾರೆ. ಉಡುಗೊರೆ ಹೆಸರಿನಲ್ಲಿ ಯಾವುದೇ ಬಂಪರ್ ಕರೆಗಳಿಗೆ ಮರುಳಾಗಬೇಡಿ. ಇದಕ್ಕೆ ಸಂಬಂಧಿಸಿದ ಬಹುದೊಡ್ಡ ವಂಚಕರ ಜಾಲವಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)