More

    Web Exclusive | ಮೂರು ಪಟ್ಟು ದರದಲ್ಲಿ ರೆಮ್​ಡಿ​ಸಿವಿರ್ ಬಿಕ್ರಿ; ಕರೊನಾ ಕ್ರೌರ್ಯದಲ್ಲೂ ಅಮಾನವೀಯ ನಡೆ

    | ಸ.ದಾ. ಜೋಶಿ ಬೀದರ್

    ಕರೊನಾ 2ನೇ ಅಲೆಗೆ ಸಿಲುಕಿ ಜಿಲ್ಲೆ ಅಕ್ಷರಶಃ ನಲುಗಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಯಾವ ಸಂದರ್ಭದಲ್ಲಿ ಯಾರ ಪ್ರಾಣಪಕ್ಷಿ ಹಾರಿ ಹೋಗುತ್ತದೆಯೋ ತಿಳಿಯದಂಥ ಭಯಾನಕ ಸ್ಥಿತಿ ನಿರ್ವಣವಾಗಿದೆ. ಇಂಥ ಆಪತ್ತಿನ ಸ್ಥಿತಿಯಿಂದ ಜನರನ್ನು ಪಾರು ಮಾಡಲು ಹಲವರು ಹಗಲಿರುಳು ಒಂದಾಗಿಸಿ ದುಡಿಯುತ್ತಿದ್ದಾರೆ. ಕಷ್ಟದಲ್ಲಿದ್ದವರಿಗೆ ಕೈಲಾದಷ್ಟು ನೆರವಿನಹಸ್ತ ಚಾಚುತ್ತಿದ್ದಾರೆ. ಆದರೆ ಕೆಲವರು ಈ ವಿಪತ್ತಿನ ಕಾಲವನ್ನೇ ಬಂಡವಾಳ ಮಾಡಿಕೊಂಡು ಅಕ್ರಮವಾಗಿ ಹಣ ಗಳಿಕೆ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

    ಜಿಲ್ಲೆಯಲ್ಲಿ ಏಪ್ರಿಲ್ 1ರಿಂದ ಕರೊನಾ ಸುನಾಮಿಯೇ ಎದ್ದಿದೆ. ನಿತ್ಯವೂ 250-300 ಪಾಸಿಟಿವ್ ಪ್ರಕರಣ ಬರುತ್ತಿವೆ. ಪಾಸಿಟಿವಿಟಿ ದರ ಶೇ.10ಕ್ಕೇರಿದೆ. ಮರಣ ಪ್ರಮಾಣವೂ ಗಣನೀಯ ವೃದ್ಧಿಯಾಗಿದೆ. ಈ ಸ್ಥಿತಿ ಸಮರ್ಥ ಎದುರಿಸುವುದು ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಥದರಲ್ಲಿ ವೈರಸ್ ದಾಳಿಯಿಂದ ಶ್ವಾಸಕೋಶ ಸೋಂಕಿಗೆ (ಲಂಗ್ಸ್ ಇನ್ಪೆಕ್ಶನ್) ಒಳಗಾದ ರೋಗಿಗಳಿಗೆ ಅಗತ್ಯವೆನಿಸಿದ ರೆಮ್​ಸಿವಿರ್ ಇಂಜೆಕ್ಷನ್ ಎಗ್ಗಿಲ್ಲದೆ ಎರಡ್ಮೂರು ಪಟ್ಟು ದುಬಾರಿ ದರದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ವ್ಯಾಪಕ ದೂರು ಕೇಳಿಬರುತ್ತಿವೆ. ಆದರೆ ಒಂದೇ ಒಂದು ದಾಳಿ ನಡೆಸಿದ, ಒಬ್ಬರನ್ನಾದರೂ ಹಿಡಿದು ವಿಚಾರಣೆ ಮಾಡಿದ ಮಾಹಿತಿ ಬಂದಿಲ್ಲ. ಇದು ಸಹಜವೇ ರೆಮ್​ಸಿವಿರ್ ಮಾಫಿಯಾದತ್ತ ಬೊಟ್ಟು ಮಾಡಿ ತೋರಿಸಿದೆ.

    ಬ್ರಿಮ್ಸ್​ನಲ್ಲಿ ಕರೊನಾ ರೋಗಿಗಳಿಗೆ ಶ್ವಾಸಕೋಶ ಸೋಂಕಿನ ಆಧಾರದಲ್ಲಿ ರೆಮ್​ಸಿವಿರ್ ಇಂಜೆಕ್ಷನ್ ಉಚಿತ ನೀಡಲಾಗುತ್ತದೆ. ಆದರೆ ಖಾಸಗಿಯಲ್ಲಿ ಚಿಕಿತ್ಸೆ ಪಡೆಯುವವರು ಖರೀದಿಸಬೇಕಾಗುತ್ತದೆ. ಸೋಂಕಿನ ಆಧಾರದ ಮೇಲೆ ಪ್ರತಿ ರೋಗಿಗೆ 4ರಿಂದ 10 ಡೋಸ್ ಇಂಜೆಕ್ಷನ್ ಕೊಡಬೇಕಾಗುತ್ತದೆ. ವಿವಿಧ ಕಂಪನಿಗಳ ಈ ಇಂಜೆಕ್ಷನ್​ನ ಒಂದು ಡೋಸ್ ಬೆಲೆ ಸರಾಸರಿ 4000-5400 ರೂ. ಇದೆೆ. ಒಂದೆಡೆ ಕೆಲ ಖಾಸಗಿಯವರು ‘ನೋ ಸ್ಟಾಕ್’ ಎಂದು ಹೇಳಿ ಕಾಳಸಂತೆಯಲ್ಲಿ ಬಿಕ್ರಿ ಮಾಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಕೊಡಬೇಕಾದ ಇಂಜೆಕ್ಷನ್ ಡೋಸ್ ಹೊರಗಡೆ ತಂದು ದುಬಾರಿ ದರದಲ್ಲಿ ಉಳ್ಳವರಿಗೆ ಮಾರುತ್ತಿರುವ ಗಂಭೀರ ಆರೋಪ ಕೇಳಿಬಂದಿವೆ. ಈ ಕಾರಣದಿಂದ ಇತ್ತೀಚೆಗೆ ಬ್ರಿಮ್್ಸ ಕೋವಿಡ್ ಆಸ್ಪತ್ರೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಬೆಳವಣಿಗೆ ಗಮನಿಸಿದರೆ ರೆಮ್​ಸಿವಿರ್ ಅಕ್ರಮ ಮಾರಾಟ ಜಾಲ ಸಕ್ರಿಯವಾಗಿರುವಂತೆ ಕಂಡುಬರುತ್ತಿದೆ.

    ಖಾಸಗಿಯವರ ನೋ ಸ್ಟಾಕ್ ಡ್ರಾಮಾ: ಏಪ್ರಿಲ್ 1ರಿಂದ ಈವರೆಗೆ ಇಲ್ಲಿನ ವಿವಿಧ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಹಾಗೂ ಫಾರ್ವ ಏಜೆನ್ಸಿಯವರಿಗೆ ಬರೋಬ್ಬರಿ 2441 ರೆಮ್​ಸಿವಿರ್ ಇಂಜೆಕ್ಷನ್ ಸರಬರಾಜಾಗಿವೆೆ. ಕೊರತೆ ನಡುವೆಯೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗಬೇಕೆಂಬ ನಿಟ್ಟಿನಲ್ಲಿ ಇಂಜೆಕ್ಷನ್ ಪೂರೈಸಲಾಗಿದೆ. ಆದರೆ ಕೊಟ್ಟಷ್ಟು ಡೋಸ್ ಸಮರ್ಪಕ ವಿತರಣೆ ನಡೆದಿಲ್ಲ. ಡೋಸ್ ಪಡೆದವರಲ್ಲಿ ಕೆಲವರು ನಾಮ್ೇವಾಸ್ತೆ ಒಂದಿಷ್ಟು ಸೋಂಕಿತರಿಗೆ ನೀಡಿ ನೋ ಸ್ಟಾಕ್ ಎಂದು ಕೈತೊಳೆದುಕೊಂಡಿದ್ದಾರೆ. ಉಳಿದ ಡೋಸ್​ಗಳನ್ನು ದುಬಾರಿ ದರದಲ್ಲಿ ವ್ಯವಸ್ಥಿತವಾಗಿ ಉಳ್ಳವರ ಪಾಲು ಮಾಡಿದ್ದಾರೆ ಎನ್ನಲಾಗಿದೆ. ಕೆಲವರು ಮಾತ್ರ ನಿಗದಿತ ದರದಲ್ಲೇ ಡೋಸ್ ಮಾರಾಟ ಮಾಡಿ ಮಾನವೀಯತೆ ಸಹ ಮೆರೆದಿದ್ದಾರೆ.

    ಆ್ಯಂಬುಲೆನ್ಸ್ ದರವೂ ಡಬಲ್: ಒಂದೆಡೆ ರೆಮ್​ಸಿವಿರ್ ದುಬಾರಿ ಬಿಕ್ರಿ ನಡೆದರೆ, ಇನ್ನೊಂದೆಡೆ ಕರೊನಾ ಸೋಂಕಿತರನ್ನು ಒಯ್ಯುವ ಖಾಸಗಿ ಆಂಬುಲೆನ್ಸ್ ದರವೂ ದಿಢೀರ್ ಎರಡು ಪಟ್ಟಿನಷ್ಟು ಹೆಚ್ಚಿಸಿದ್ದು, ಬಡವರ ಶೋಷಣೆ ಮಾಡಲಾಗುತ್ತಿದೆ. ಇಲ್ಲಿಂದ ಹೈದರಾಬಾದ್, ಸಿಕಿಂದ್ರಾಬಾದ್​ಗೆ ಹೆಚ್ಚಿನ ರೋಗಿಗಳು ಹೋಗುತ್ತಾರೆ. ಮುಂಚೆ 5-6 ಸಾವಿರ ರೂ. ಪಡೆಯುತ್ತಿದ್ದ ಆಂಬುಲೆನ್ಸ್​ನವರು ಇದೀಗ 10-12 ಸಾವಿರ ರೂ. ಕೇಳುತ್ತಿದ್ದಾರೆ. ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದರೆ 15 ಸಾವಿರ ರೂ. ಎನ್ನುತ್ತಿದ್ದಾರೆ. ಹಣವಿದ್ದವರು ಕೇಳಿದಷ್ಟು ಕೊಟ್ಟು ಹೋಗುತ್ತಿದ್ದಾರೆ. ಆದರೆ ಬಡ, ಮಧ್ಯಮ ವರ್ಗದ ಜನರಿಗೆ ಇದು ಕಷ್ಟಕರ.

    ದುಬಾರಿ ದರದಲ್ಲಿ ರೆಮ್​ಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿರುವ ಬಗ್ಗೆ ನನಗೂ ದೂರುಗಳು ಬಂದಿವೆ. ಇತ್ತೀಚೆಗೆ ನಡೆಸಿದ ಸಭೆಯಲ್ಲೂ ಈ ವಿಷಯವನ್ನು ಕೆಲ ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ. ತನಿಖೆ ನಡೆಸಿ ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಸಿ, ಎಸ್ಪಿಗೆ ನಿರ್ದೇಶನ ನೀಡಿದ್ದೇನೆ.

    | ಪ್ರಭು ಚವ್ಹಾಣ್ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts